ರೈಲು ನಿಲ್ದಾಣದಲ್ಲಿ ಶಂಕಾಸ್ಪದ ರೀತಿಯಲ್ಲಿ ಯುವಕ ಸೆರೆ: ಕಳವಿಗೆ ಬಂದದ್ದೆಂದು ಪೊಲೀಸ್
ಕಾಸರಗೋಡು: ರೈಲುಗಳು ಸಹಿತ ಹಲವಾರು ಕಡೆ ಕಳವು ನಡೆಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ಕಣ್ಣೂರು ಶಾಂತಿಗಿರಿ ನಿವಾಸಿ ನಿಖಿಲ್ (35)ನನ್ನು ಕಾಸರಗೋಡು ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ನಿನ್ನೆ ಮುಂಜಾನೆ ೩ನೇ ಫ್ಲಾಟ್‌ಫಾರ್ಮ್‌ನಲ್ಲಿ ಶಂಕಾಸ್ಪದವಾಗಿ ಕಂಡು ಬಂದ ಯುವಕನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ವಿಳಾಸ ಕೇಳಿದಾಗ ಹಿಂದಿ ಮಿಶ್ರಿತ ಮಲೆಯಾಳದಲ್ಲಿ ಪರಸ್ಪರ ವಿರುದ್ಧವಾದ ರೀತಿಯಲ್ಲಿ ಉತ್ತರ ನೀಡಿದ್ದಾನೆ. ಈ ಬಗ್ಗೆ ಶಂಕೆ ತಾಳಿದ ಪೊಲೀಸರು ಸಮಗ್ರವಾಗಿ ಪ್ರಶ್ನಿಸಿದಾಗ ಈತ ಕಳವಿಗೆ ತಲುಪಿದ್ದೆಂದು ಸ್ಪಷ್ಟಗೊಂಡಿದೆ. ಪರಶುರಾಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳವು ನಡೆಸಲು ಈತ ಸಿದ್ಧತೆ ನಡೆಸುತ್ತಿದ್ದನು. ರೈಲ್ವೇ ಪೊಲೀಸರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ತಲಶ್ಶೇರಿ ಪೊಲೀಸರು ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ. ಈತನ ವಿರುದ್ಧ ತಲ್ಶೇರಿಯಲ್ಲಿ ೩ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಹಲವಾರು ರೈಲುಗಳಲ್ಲಿ ಕಳವು ನಡೆಸಿದ ಪ್ರಕರಣಗಳು ಈತನ ಹೆಸರಲ್ಲಿದೆ.
ಕಾಸರಗೋಡು ರೈಲ್ವೇ ಪೊಲೀಸ್ ಎಸ್‌ಐ ರೆಜಿ ಕುಮಾರ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಮಹೇಶ್, ಪ್ರವೀಣ್ ಪೀಟರ್, ಸುಮಿ ಎಂಬಿವರು ಸೆರೆಹಿಡಿದ ತಂಡದಲ್ಲಿದ್ದರು.