ರೈಲ್ವೇಯಲ್ಲಿ ಕೆಲಸ ನೀಡುವುದಾಗಿ ವಂಚನೆ: ಬಂಧಿತ ಯುವತಿಯ ಸಹಚರರ ವಿರುದ್ಧ ಜಿಲ್ಲೆಯಲ್ಲೂ ಕೇಸು
ಕಾಸರಗೋಡು: ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವು ದಾಗಿ ಹಣ ಪಡೆದು ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಚಕ್ಕರಕ್ಕಲ್ ಪೊಲೀಸರು ಬಂಧಿಸಿದ ಕೊಲ್ಲಂ ಕೊಟ್ಟಿಯಂ ನಿವಾಸಿ ನಿಯಾ (28)ಳ ಸಹಚರರ ವಿರುದ್ಧ ಜಿಲ್ಲೆಯಲ್ಲಿ ಕೇಸು ದಾಖಲುಗೊಂಡಿದೆ. ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಓರ್ವರಿಂದ 10.2 ಲಕ್ಷ ರೂ. ಪಡೆದು ಬಳಿಕ ವಂಚನೆಗೈದ ದೂರಿನಂತೆ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಿಯಾಳನ್ನು ಎರ್ನಾಕುಳಂ ಕಡುವತ್ರ ಬಾಡಿಗೆ ಮನೆಯೊಂದರಿಂದ ಚಕ್ಕರಕ್ಕಲ್ ಪೊಲೀಸರು ಬಂಧಿಸಿದ್ದಾರೆ. ಅದಾದ ಬೆನ್ನಲ್ಲೇ ಇದೇ ಜಾಲದವರಾದ ಆಕೆಯ ಸಹಚರರ ವಿರುದ್ಧ ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೀಮೇನಿಯ ವಿಜಯನ್ ಎಂಬವರು ಈ ಬಗ್ಗೆ ದೂರು ನೀಡಿದ್ದು ತನ್ನ ಪುತ್ರಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ನೀಡುವುದಾಗಿ ನಂಬಿಸಿ ಆರೋಪಿಗಳು ತನ್ನಿಂದ 10.20 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಕಣ್ಣೂರು ಮಕ್ರೇರಿಯ ಲಾಲ್‌ಚಂದ್, ಕಣ್ಣೂರು ಚೊಕ್ಲಿಯ ಕೆ. ಶಶಿ, ಕೊಲ್ಲಂ ಪುನಲೂರಿನ ಶರತ್ ಎಸ್. ಶಿವನ್, ಈತನ ಪತ್ನಿ ಎಬಿ ಮತ್ತು ಪುನಲೂರಿನ ಗೀತಾರಾಣಿ ಎಂಬವರ ವಿರುದ್ಧ ಚೀಮೇನಿ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.