ಉಪ್ಪಳ: ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪುರ, ಪೆರಿಂಗಾಡಿ ವರೆಗಿನ ಸುಮಾರು ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಇಲ್ಲಿ ಮೂರು ವರ್ಷದ ಹಿಂದೆ ನಿರ್ಮಿಸಿದ ತಡೆಗೋಡೆ ಸಮುದ್ರ ಪಾಲಾಗಿದೆ. 2018ರಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 4.99 ಕೋಟಿ ರೂ. ವ್ಯಯಿಸಿ ನಿರ್ಮಿಸಲಾದ ಕುರ್ಚಿಪಳ್ಳ-ಮಣಿಮುಂಡ ರಸ್ತೆಯೂ ಸಂಪೂರ್ಣ ಸಮುದ್ರ ಪಾಲಾಗಿದೆ. ಇದರ ಜೊತೆಯಲ್ಲಿ ನಬಾರ್ಡ್‌ನ ಸಹಾಯದಿಂದ ನಿರ್ಮಿಸಿದ ಹನುಮಾನ್ ನಗರ ರಸ್ತೆಯೂ ನೀರು ಪಾಲಾಗಿದೆ. ಸುಮಾರು ೪೦೦ಕ್ಕೂ ಮೀನು ಕಾರ್ಮಿಕರ ಕುಟುಂಬಗಳು ಈ ಪರಿಸರದಲ್ಲಿದ್ದು, ಇವರೆಲ್ಲರ ಬದುಕು ಸಂಕಷ್ಟದಲ್ಲಿದೆ. ಇವರಲ್ಲಿ ಕೆಲವು ಮನೆಗಳು ಯಾವುದೇ ಕ್ಷಣ ನೀರು ಪಾಲಾಗುವ ಸಾಧ್ಯತೆಯಿದ್ದು, ನೂರಾರು ಎಕ್ರೆ ಭೂಮಿ, ತೆಂಗಿನ ಮರಗಳು, ಗಾಳಿ ಮರಗಳು ಕೊಚ್ಚಿ ಹೋಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ತಿಳಿಸಿದ್ದಾರೆ. ಮೀನು ಕಾರ್ಮಿಕರಿಗಾಗಿ ನಿರ್ಮಿಸಲಾದ ಶೆಡ್ ಸಮುದ್ರ ಪಾಲಾಗಿದೆ. ಸಂಕಷ್ಟದಲ್ಲಿರುವ ಮೀನು ಕಾರ್ಮಿಕರಿಗೆ ಉಚಿತ ರೇಶನ್ ಮಂಜೂರು ಮಾಡಲು ತುರ್ತು ಕ್ರಮ ಕೈಗೊಳ್ಳಲು ಬೇಕೆಂದು ಹಾಗೂ ಕಡಲ್ಕೊರೆತವನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆ, ಹೊಸ ರಸ್ತೆ ನಿರ್ಮಾಣ ಕೈಗೊಳ್ಳಲು ಮೀನುಗಾರಿಕೆ ಇಲಾಖೆ, ಬಂದರು ಇಲಾಖೆ ಮುಂದೆ ಬರಬೇಕೆಂದು ಅವರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ತಂಡದಲ್ಲಿ ಸಿಪಿಎಂ ಪ್ರಾದೇಶಿಕ ಸೆಕ್ರಟರಿ ರವೀಂದ್ರ ಶೆಟ್ಟಿ ಬೇಕೂರು, ಸಾದಿಕ್ ಚೆರುಗೋಳಿ, ಹರೀಶ್ ಬೇರಿಕೆ, ಪ್ರವೀಣ್ ಬೇಕೂರು, ಮೊಗವೀರಪಟ್ಣ, ಭಜನಾ ಮಂದಿರದ ಪದಾಧಿಕಾರಿಗಳಾದ ಜನಾರ್ದನ ಸಾಲಿ ಯಾನ್, ಪ್ರಶಾಂತ್, ಪ್ರಭಾಕರ, ದೇವ ದಾಸ್, ಅಶೋಕ್ ಮೊದಲಾದವರಿದ್ದರು.
ಕಡಲ್ಕೊರೆತ ಇನ್ನೂ ಮುಂದುವರಿದರೆ ಶಾರದಾ ನಗರದ ಶಕುಂತಳ ಸಾಲಿಯಾನ್‌ರ ಮನೆ ಯಾವುದೇ ಕ್ಷಣ ಸಮುದ್ರ ಪಾಲಾಗುವ ಭೀತಿಯಿದೆ.
ಅಲ್ಲದೆ ಸುನಾಂದ ಸಾಲಿಯಾನ್, ರವಿ, ಶಶಿಕಲ, ನಿವೇದಿತ ಮನೆ ಹಾಗೂ ಶ್ರೀ ಶಾರದಾ ಭಜನಾ ಮಂದಿರ ಅಪಾಯದ ಸ್ಥಿತಿಯಲ್ಲಿದೆ. ಮಣಿಮುಂಡದಲ್ಲಿ ಜಯರಾಮ, ಕೇಶವ, ಅಲಿಮಾ, ಅವ್ವಾಬಿ ಮೊದಲಾದವರ ಮನೆಯೂ ಅಪಾಯದಂಚಿನಲ್ಲಿದ್ದು, ಜಯರಾಮರ ಮನೆ ಅಂಗಳ ತನಕ ಸಮುದ್ರ ತೆರೆ ತಲುಪುತ್ತಿದ್ದು, ಅಂಗಳದಲ್ಲಿ ನೀರು ತುಂಬಿಕೊಂಡಿದೆ. ಮೂಸೋಡಿ ಸಹಿತ ಹನುಮಾನಗರ, ಐಲ ಶಿವಾಜಿ ನಗರ, ಕುದುಪುಳು, ಬಂಗ್ಲ, ಪೆರಿಂಗಾಡಿ, ಶಿರಿಯಾ, ಮಂಜೇಶ್ವರ ಕಣ್ವತೀರ್ಥ ಮೊದಲಾದ ಪ್ರದೇಶದಲ್ಲೂ ರಸ್ತೆಗಳೂ ಹಾಗೂ ಮನೆಗಳು ಅಪಾಯದ ಅಂಚಿನಲ್ಲಿದೆ. ಶಾರದಾ ನಗರ ಸಹಿತ ಕಡಲ್ಕೊರೆತ ಪ್ರದೇಶಕ್ಕೆ ಫಿಶರೀಸ್ ಅಧಿಕಾರಿ ಪ್ರೀತ, ವೆಂಕಟೇಶ್, ವಿಲ್ಲೇಜ್ ಆಫೀಸರ್ ಸಹಿತ ಹಲವು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.