ಲಂಚವಾಗಿ ಪಡೆದ ಹಣ ಶೂನೊಳಗೆ ಬಚ್ಚಿಟ್ಟ ಗ್ರಾಮಾಧಿಕಾರಿ ಸೆರೆ
ತೃಶೂರು: ಲಂಚವಾಗಿ ಪಡೆದ 3000 ರೂಪಾಯಿಗಳನ್ನು ಶೂನೊಳಗೆ ಅಡಗಿಸಿಟ್ಟ ಗ್ರಾಮಾಧಿಕಾರಿಯನ್ನು ವಿಜಿಲೆನ್ಸ್ ಸೆರೆಹಿಡಿದ ಘಟನೆ ನಡೆದಿದೆ. ಆದಿರಪಳ್ಳಿ ವಿಲ್ಲೇಜ್ ಆಫೀಸರ್ ಕೆ.ಎಲ್. ಜೂಡ್ ಸೆರೆಗೀಡಾದ ವ್ಯಕ್ತಿಯೆನ್ನಲಾಗಿದೆ.
ಭೂಮಿ ಮಾರಾಟಗೈಯ್ಯುವ ಮುಂಚೆ ರೆಕಾರ್ಡ್ ಆಫ್ ರೈಟ್ಸ್ ಸರ್ಟಿಫಿಕೇಟ್ ಆಗ್ರಹಪಟ್ಟ ವ್ಯಕ್ತಿಯಿಂದ ಜೂಡ್ ಲಂಚ ಕೇಳಿದ್ದನೆನ್ನಲಾಗಿದೆ. ಸರ್ಟಿಫಿಕೇಟ್‌ಗಾಗಿ ಅರ್ಜಿ ನೀಡಿದ ವ್ಯಕ್ತಿ ಈ ಬಗ್ಗೆ ವಿಜಿಲೆನ್ಸ್‌ಗೆ ತಿಳಿಸಿದ್ದರು. ಲಂಚ ನೀಡುವುದಾಗಿ ತಿಳಿಸಿದ ಬಳಿಕ ಗ್ರಾಮಾಧಿಕಾರಿ ನಿನ್ನೆ ಸ್ಥಳ ಪರಿಶೀಲನೆಗಾಗಿ ತೆರಳಿದ್ದು, ಅಲ್ಲಿಂದ ಮರಳಿದ ಬಳಿಕ ಹಣ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ವಿಜಿಲೆನ್ಸ್ ನೀಡಿದ ಫಿನೋಪ್ತಲಿನ್ ಲೇಪಿತ ನೋಟು ಗಳನ್ನು ವ್ಯಕ್ತಿ ಹಸ್ತಾಂತರಿಸಿದ್ದರು. ಗ್ರಾಮಾಧಿಕಾರಿ ಹಣ ಪಡೆದ ತಕ್ಷಣ ವಿಜಿಲೆನ್ಸ್ ಅಧಿಕಾರಿಗಳು ಅಲ್ಲಿಗೆ ತಲುಪಿದ್ದರು. ಅಷ್ಟರೊಳಗೆ ಹಣವನ್ನು ಗ್ರಾಮಾಧಿಕಾರಿ ಶೂನೊಳಗೆ ಬಚ್ಚಿಟ್ಟಿದ್ದನು. ವಿಜಿಲೆನ್ಸ್ ನಡೆಸಿದ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಆರೋಪಕ್ಕೆಡೆಯಾದ ಗ್ರಾಮಾಧಿಕಾರಿ 2022ರಲ್ಲಿ ಕಾಸರಗೋಡಿನಲ್ಲಿ ಉದ್ಯೋಗದಲ್ಲಿದ್ದ ವೇಳೆ ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯೆಂದು ಹೇಳಲಾಗುತ್ತಿದೆ.