ಲಾರಿ ಢಿಕ್ಕಿ ಹೊಡೆದು ಬೈಕ್ ಪ್ರಯಾಣಿಕರಾದ ಇಬ್ಬರು ಯುವಕರು ಮೃತ್ಯು

ಕಾಸರಗೋಡು: ನಿಯಂತ್ರಣ ತಪ್ಪಿದ ಲಾರಿ ಬೈಕ್ ಹಾಗೂ ಬೇರೊಂದು ಲಾರಿಗೆ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ   ಸಂಭವಿಸಿದೆ.  ಬೈಕ್ ಪ್ರಯಾಣಿಕರಾದ ಕಾಞಂಗಾಡ್ ಹಳೆ ಕಡಪ್ಪುರ ನಿವಾಸಿ ಆಶಿಕ್ (20), ಮೀನಾಪೀಸ್ ಕೋಟ ಎಂಬಲ್ಲಿ ವಾಸಿಸುವ ಬೆಂಗಳೂರು ನಿವಾಸಿ ಬಾಬಾಪಕ್ರುದ್ದೀನ್‌ರ ಪುತ್ರ ತನ್ವೀರ್ (35) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಾಞಂಗಾಡ್ ಬಳಿಯ ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಸಮೀಪ ನಿನ್ನೆ ರಾತ್ರಿ 9 ಗಂಟೆ ವೇಳೆ ಈ ಭೀಕರ ಅಪಘಾತವುಂಟಾಗಿದೆ.     ನೀಲೇಶ್ವರ ಭಾಗದಿಂದ  ಬಂದ ಲಾರಿ  ನಿಯಂತ್ರಣ ತಪ್ಪಿ ಬೇರೊಂದು ಲಾರಿ ಹಾಗೂ ಬೈಕ್‌ಗೆ ಢಿಕ್ಕಿ ಹೊಡೆದಿದೆ.  ಬೈಕ್‌ನಲ್ಲಿದ್ದವರು ನಿಲ್ಲಿಸಿದ್ದ ಲಾರಿಯ ಮುಂಭಾಗದಲ್ಲಾಗಿ ಹೋಟೆಲ್‌ಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬಂದ ಮತ್ತೊಂದು ಲಾರಿ ಢಿಕ್ಕಿ ಹೊಡೆದಿದೆ.  ಎರಡೂ ಲಾರಿಗಳ ಮಧ್ಯೆ ಸಿಲುಕಿದ ಯುವಕರು ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಲಾರಿಯ ಚಾಲಕ ಮದ್ಯದಮಲಿನಲ್ಲಿದ್ದನೆಂದು ನಾಗರಿಕರು ಹೇಳುತ್ತಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ತಿಳಿದ ಹೊಸದುರ್ಗ ಪೊಲೀಸರು ಹಾಗೂ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ  ಪರಿಶೀಲನೆ ನಡೆಸಿದ್ದಾರೆ.

You cannot copy contents of this page