ಲೀಗ್‌ಗೆ ಮತ್ತೆ ಕಷ್ಟಕಾಲ: ಪೈವಳಿಕೆ ಪಂ. ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಸದಸ್ಯತ್ವ ರದ್ದು ಸಾಧ್ಯತೆ

ಪೈವಳಿಕೆ: ಕುಂಬಳೆ ಪಂಚಾಯ ತ್‌ನಲ್ಲಿ ವಿವಿಧ ರೀತಿಯ ಭ್ರಷ್ಟಾಚಾರ ಆರೋಪಗಳು ಕೇಳಿಬಂದು  ಆಡಳಿತ ಪಕ್ಷವಾದ ಮುಸ್ಲಿಂ ಲೀಗ್ ಸಂದಿಗ್ಧತೆ ಯಲ್ಲಿ ಸಿಲುಕಿರುವಂತೆಯೇ ಪೈವಳಿಕೆ ಪಂಚಾಯತ್‌ನಲ್ಲಿ ಲೀಗ್ ಸದಸ್ಯೆ ಯೊಬ್ಬರ ಸದಸ್ಯತ್ವ ರದ್ದುಗೊಳ್ಳುವ  ಸಾಧ್ಯತೆ ಇದ್ದು, ಇದು ಲೀಗ್‌ಗೆ ಮತ್ತಷ್ಟು ಹೊಡೆತ ನೀಡಿದೆ.

ಪೈವಳಿಕೆ ಪಂಚಾಯತ್ ಕ್ಷೇಮ ಕಾರ್ಯ  ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಸಿಯಾಸುನ್ನೀಸರ ಸದಸ್ಯತ್ವ ನಷ್ಟಗೊಳ್ಳುವ ಸಾಧ್ಯತೆ ಇದೆಯೆನ್ನ ಲಾಗಿದೆ. ಪಂಚಾಯತ್‌ನ ಎರಡನೇ ವಾರ್ಡ್ ಸದಸ್ಯೆಯಾದ ಇವರು  ಕಳೆದ ಫೆಬ್ರವರಿ ಬಳಿಕ ನಿರಂತರವಾಗಿ ಮೂರಕ್ಕಿಂತ ಹೆಚ್ಚು ಪಂಚಾಯತ್ ಆಡಳಿತ ಸಮಿತಿ ಸಭ ಹಾಗೂ ಗ್ರಾಮ  ಸಭೆಗಳಲ್ಲಿ ಭಾಗವಹಿಸಿರಲಿಲ್ಲ. ಹೀಗೆ ನಿರಂತರವಾಗಿ ಮೂರು ಪಂಚಾಯತ್ ಆಡಳಿತ ಸಮಿತಿ ಸಭೆಯಲ್ಲಿ ಭಾಗವಹಿಸದ ಸಿಯಾಸುನ್ನೀಸರ ಸದಸ್ಯತ್ವವನ್ನು ಅಸಿಂಧು ಗೊಳಿಸುವುದಾಗಿಯೂ, ಆದ್ದರಿಂದ ಈ ಬಗ್ಗೆ ಏನಾದರೂ ತಿಳಿಸಲಿದ್ದರೆ ತಿಳಿಸಬೇಕೆಂದು ಪಂಚಾಯತ್ ಕಾರ್ಯದರ್ಶಿ ತಿಳಿಸಿದ್ದರು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದುದರಿಂದ ಸದಸ್ಯೆಯನ್ನು ಕರೆಸಿ ವಿಷಯ ತಿಳಿಸಿದರೂ ಈವೇಳೆ ಪ್ರತಿಕ್ರಿಯೆ ತಿಳಿಸುವುದಾಗಿ ಹೇಳಿ ಸಿಯಾಸುನ್ನೀಸ ಮರಳಿದ್ದು, ಆದರೆ ಇದುವರೆಗೆ ಯಾವುದೇ ಮಾಹಿತಿ ಲಭಿಸಿಲ್ಲವೆನ್ನಲಾಗಿದೆ. ಇದೇ ವೇಳೆ ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಆಡಳಿತ ಸಮಿತಿ ಸಭೆಯಲ್ಲಿ ಭಾಗವಹಿಸದ ವಿಷಯವನ್ನು ಪಂಚಾಯತ್ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

೧೯ ವಾರ್ಡ್‌ಗಳಿರುವ ಪೈವಳಿಕೆ ಪಂಚಾಯತ್‌ನಲ್ಲಿ ಸಿಪಿಎಂನ ಜಯಂತಿ ಅಧ್ಯಕ್ಷೆಯಾಗಿದ್ದಾರೆ. ಬಿಜೆಪಿಯ ಪುಷ್ಪಲಕ್ಷ್ಮಿ ಉಪಾಧ್ಯಕ್ಷೆ ಹಾಗೂ ಮುಸ್ಲಿಂ ಲೀಗ್ ಸದಸ್ಯೆಯಾದ ಸಿಯಾಸುನ್ನೀಸ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಚೆಯರ್ ಪರ್ಸನ್ ಆಗಿ ನೇಮಕಗೊಂಡಿದ್ದರು. ಈ ಮೂಲಕ ಅಭಿವೃದ್ಧಿಯಲ್ಲಿ ತಮಗೆ ರಾಜಕೀಯವಿಲ್ಲವೆಂಬ ನಿಲುವನ್ನು ಇವರು ತೋರ್ಪಡಿಸಿದ್ದರು.

Leave a Reply

Your email address will not be published. Required fields are marked *

You cannot copy content of this page