ಲೈಫ್ ಯೋಜನೆಯಲ್ಲಿ ಒಳಪಟ್ಟಿರುವುದಾಗಿ ತಿಳಿಸಿದ ಅಧಿಕಾರಿಗಳ ಮಾತು ನಂಬಿ ಇದ್ದ ಮನೆಯನ್ನೂ ಕೆಡಹಿ ಕೊನೆಗೆ ಬೀದಿ ಪಾಲಾದ ಕುಟುಂಬ
ಕಾಸರಗೋಡು: ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಪ್ರಕಾರ ಮನೆ ಮಂಜೂರಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದನ್ನು ನಂಬಿದ ಕುಟುಂಬ ತಮ್ಮ ಹಳೇ ಮುರುಕಲು ಮನೆಯನ್ನು ಕೆಡಹಿದ ಬಳಿಕ ಮನೆ ಮಂಜೂರಾಗಿರುವುದು ನಿಮಗಲ್ಲ ಅದು ಬೇರೆಯವರಿಗೆ ಆಗಿದೆ ಎಂದು ಪಂಚಾಯತ್ ಅಧಿಕೃತರು ತಿಳಿಸಿ ಅದರಿಂದ ಆ ಕುಟುಂಬ ಈಗ ಬೀದಿ ಪಾಲಾಗ ಬೇಕಾದ ಸ್ಥಿತಿ ಉಂಟಾಗಿದೆ. ಮೊಗ್ರಾಲ್ ಪುತ್ತೂರು ಕೋಟೆ ಹಿತ್ತಿಲಿನ ಸಾವಿತ್ರಿಯವರ ಕುಟುಂಬಕ್ಕೆ ಈ ದುಸ್ಥಿತಿ ಉಂಟಾಗಿದೆ.
ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಸಾವಿತ್ರಿ ಲೈಫ್ ಮಿಷನ್ ಯೋಜನೆ ಪ್ರಕಾರ ಹೊಸ ಮನೆ ನಿರ್ಮಾಣಕ್ಕಾಗಿ ಪಂಚಾಯತ್ಗೆ ಅರ್ಜಿ ಸಲ್ಲಿಸಿದ್ದರು. ಅದಾದ ಬಳಿಕ ಈ ಯೋಜನೆ ಪ್ರಕಾರ ನಿಮಗೆ ಮನೆ ಮಂಜೂರು ಮಾಡಲಾಗಿದೆ ಎಂದು ಸಂಬಂಪಟ್ಟ ಅಧಿಕಾರಿಗಳು ಸಾವಿತ್ರಿಗೆ ತಿಳಿಸಿದರು. ಅದನ್ನು ನಂಬಿಸಿ ಸಾವಿತ್ರಿ ಯವರು ತಮ್ಮ ಹಳೇ ಮುರುಕಲು ಮನೆಯನ್ನು ಕೆಡಹಿ ಅಲ್ಲೇ ಪಕ್ಕ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿಗೆ ತಮ್ಮ ವಾಸ ಬದಲಾಯಿಸಿದರು. ಮಾತ್ರವಲ್ಲದೆ ಸಾಲ ಮಾಡಿ ಕೊಳವೆ ಬಾವಿಯನ್ನೂ ತೋಡಿದರು. ಇಷ್ಟೆಲ್ಲಾ ಆದ ಬಳಿಕವಷ್ಟೇ ಈ ಯೋಜನೆಯಂತೆ ಮನೆ ಮಂಜೂರಾಗಿರುವುದು ನಿಮಗಲ್ಲ ಅದು ಬೇರೆಯವರಿಗೆ ಆಗಿದೆ ಎಂದು ಪಂಚಾಯತ್ ಅಧಿಕಾರಿಗಳು ಬಂದು ಹೇಳಿದಾಗ ಸಾವಿತ್ರಿ ಮತ್ತು ಅವರ ಕುಟುಂಬದವರಿಗೆ ಒಂದೇ ಬಾರಿ ದಿಗಿಲುಬಡಿದಂತಾಯಿತು.
ಸಾವಿತ್ರಿಯ ಪತಿ ಮತ್ತುಮಕ್ಕಳು ಅಸೌಖ್ಯದಿಂದ ಬಳಲುತ್ತಿರುವವರಾ ಗಿದ್ದಾರೆ. ಪಂಚಾಯತ್ ಅಧಿಕಾ ರಿಗಳ ಮಾತು ನಂಬಿ ಹೊಸ ಮನೆ ನಿರ್ಮಿಸಲು ಇದ್ದ ಹಳೇ ಮನೆ ಯನ್ನು ಕೆಡಹಿದ ಸಾವಿತ್ರಿಯವರು ಮತ್ತು ಅವರ ಕುಟುಂಬದವರು ಈಗ ಬೀದಿ ಪಾಲಾಗಿದ್ದು, ಅವರನ್ನು ಸಂತೈಸುವವರೂ ಯಾರೂ ಇಲ್ಲದಂತಾಗಿದೆ.
ಪರಸ್ಪರ ಕೇಸು ದಾಖಲು
ಕಾಸರಗೋಡು: ಮೊಗ್ರಾಲ್ ಪುತ್ತೂರು ಕೋಟೆವಳಪ್ಪಿನ ಸಾವಿತ್ರಿಯವರು ನೀಡಿದ ದೂರಿನ ಪ್ರಕಾರ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ನ ವಿ.ಇ.ಒ ಅಬ್ದುಲ್ ನಾಸರ್ರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲೈಫ್ ಮಿಷನ್ ಯೋಜನೆ ಪ್ರಕಾರ ಮನೆ ಲಭಿಸಲು ಸಲ್ಲಿಸಿದ ದಾಖಲೆ ಪತ್ರಗಳನ್ನು ಹಿಂತಿಗುರಿ ಪಡೆಯಲೆಂದು ಜೂನ್ ೧೩ರಂದು ನಾನು ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಗೆ ಹೋದಾಗ ನನ್ನನ್ನು ಅಲ್ಲಿ ಕೊಠಡಿಯೊಳಗೆ ೧೫ ನಿಮಿಷಗಳ ತನಕ ಕೂಡಿಹಾಕಿ ಆ ಕೊಠಡಿಯ ಬಾಗಿಲನ್ನು ಹೊರಗಿನಿಂದ ಮುಚ್ಚಲಾಯಿತೆಂದು ಆರೋಪಿಸಿ ಸಾವಿತ್ರಿ ನೀಡಿದ ದೂರಿನಂತೆ ಮೊಗ್ರಾಲ್ ಪುತ್ತೂರು ಪಂಚಾಯತ್ನ ವಿಲ್ಲೇಜ್ ಎಕ್ಸ್ಟೆನ್ಶನಲ್ ಆಫೀಸರ್ ಅಬ್ದುಲ್ ನಸೀರ್ರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ರೀತಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಕಚೇರಿಯ ವಿಲ್ಲೇಜ್ ಎಕ್ಸ್ಟೆನ್ಶನ್ ಆಫೀಸರ್ ಅಬ್ದುಲ್ ನಸೀರ್ ಅವರು ನೀಡಿದ ದೂರಿನ ಪ್ರಕಾರ ಪ್ರಮೀಳಾ ಮಜಾಲ್, ಕೋಟೆವಳಪ್ಪು ಸಾವಿತ್ರಿ, ಉಷಾ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನ್ ೧೩ರಂದು ಈ ನಾಲ್ಕು ಮಂದಿ ಮೊಗ್ರಾಲ್ ಪುತ್ತೂರು ಕಚೇರಿಗೆ ಬಂದು ಆ ಪೈಕಿ ಸಾವಿತ್ರಿಗೆ ಲೈಫ್ ಮಿಶನ್ ಯೋಜನೆ ಪ್ರಕಾರ ಮನೆ ನಿರ್ಮಿಸಲು ಆರ್ಥಿಕ ಸಹಾಯ ಲಭಿಸದೆ ವಿರೋಧದಿಂದ ಅವರು ತನ್ನನ್ನು ಒಂದು ಗಂಟೆ ತನಕ ತಡೆದು ನಿಲ್ಲಿಸಿ ನನ್ನ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ನಸೀರ್ ಹೇಳಿದ್ದಾರೆ.