ಲೋಕಸಭೆಯ ಕೊನೆಯ ಅಧಿವೇಶನ ಆರಂಭ: ಮಧ್ಯಂತರ ಬಜೆಟ್ ನಾಳೆ ಮಂಡನೆ
ದೆಹಲಿ: ನರೇಂದ್ರಮೋದಿ ನೇತೃತ್ವದ ಸರಕಾರದ ಎರಡನೇ ಅವಧಿಯ ಕೊನೆಯ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಇದು ೧೭ನೇ ಲೋಕಸಭೆಯ ಕೊನೆಯ ಅಧಿವೇಶನವೂ ಆಗಿದೆ. ಇಂದು ಆರಂಭಗೊಂಡ ಅಧಿವೇಶನ ಫೆ. ೯ರ ತನಕ ಮುಂದುವರಿಯಲಿದೆ.
ಹೊಸದಾಗಿ ನಿರ್ಮಿಸಲಾದ ಸಂಸತ್ ಭವನ್ ಕಟ್ಟಡದಲ್ಲಿ ಸಂಸತ್ ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಿದರು. ಕಳೆದ ಲೋಕಸಭಾ ಅಧಿವೇಶನದ ವೇಳೆ ಸಂಸತ್‌ನ ಒಳಗೆ ಮತ್ತು ಹೊರಗೆ ದುಷ್ಕರ್ಮಿಗಳು ಹೊಗೆ ಬಾಂಬ್ ಸಿಡಿದು ಆ ಮೂಲಕ ಇಡೀ ಸಂಸತ್‌ನ್ನೇ ಭಾರೀ ಭೀತಿ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸಂಸತ್‌ನ ಒಳಗೆ ಮತ್ತು ಸುತ್ತಲೂ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
೨೦೨೪-೨೫ನೇ ಹಣಕಾಸು ವರ್ಷದ ಮಧ್ಯಂತರ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬೆಳಿಗ್ಗೆ ೧೧ ಗಂಟೆಗೆ ಲೋಕಸಭೆಯಲ್ಲಿ ಮಂಡಿಸುವರು. ಬಜೆಟ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಿನ್ನೆ ಸರ್ವಪಕ್ಷ ಸಭೆಯನ್ನೂ ನಡೆಸಿದರು. ಇದು ಮೋದಿ ಸರಕಾರದ ಎರಡನೇ ಅವಧಿಯ ಕೊನೆಯ ಅಧಿವೇಶನವಾ ಗಿರುವುದರ ಹಿನ್ನೆಲೆಯಲ್ಲಿ ಇದು ಕಡಿಮೆ ಅವಧಿಯ ಅಧಿವೇಶನವೂ ಆಗಿದೆ. ಹಣಕಾಸು ಸಚಿವರು ಸಂಸತ್‌ನಲ್ಲಿ ಇಂದು ಲೇಖಾನುದಾನ ವನ್ನೂ ಮಂಡಿಸಲಿದ್ದಾರೆ. ಲೋಕಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ಈಬಾರಿ ಪೂರ್ಣ ಬಜೆಟ್ ಮಂಡನೆಯಾಗದು. ಇದು ಕೇವಲ ಮಧ್ಯಂತರ ಬಜೆಟ್ ಮಾತ್ರವೇ ಆಗಲಿದೆ. ಮುಂಬರುವ ಲೋಕಸಭಾ ಚುನಾವಣೆ ಬಳಿಕ ರಚನೆಯಾಗುವ ನೂತನ ಸರಕಾರ ಮುಂದೆ ಪೂರ್ಣ ಬಜೆಟ ಮಂಡಿಸಲಿದೆ.