ಲೋಕಸಭೆ ಚುನಾವಣೆಗೆ ಮುಂಚಿತ ವರ್ಕಾಡಿ ಪಂ.ನಲ್ಲಿ ಸಹಕಾರಿ ಚುನಾವಣೆ ಕಾವು
ಮಂಜೇಶ್ವರ: ಪಾರ್ಲಿಮೆಂಟ್ ಚುನಾವಣೆಗಾಗಿ ರಾಜಕೀಯ ರಂಗ ಬಿಸಿಯಾಗುತ್ತಿರುವಂತೆ ರಾಜ್ಯದ ಉತ್ತರ ಭಾಗದಲ್ಲಿರುವ ಕೊಡ್ಲಮೊಗರು- ಪಾತೂರಿನಲ್ಲಿ ಚುನಾವಣೆಯ ಕಾವು ಇಮ್ಮಡಿಯಾಗಿದೆ. ೧೮ರಂದು ನಡೆಯುವ ವರ್ಕಾಡಿ ಪಂಚಾಯತ್‌ನ ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ ಈ ಪ್ರದೇಶದಲ್ಲಿ ಕಾವು ಏರಿಸಿದೆ. ಸೊಸೈಟಿಯಲ್ಲಿ ೧೧ ಮಂದಿ ನಿರ್ದೇಶಕರಿದ್ದಾರೆ. ಎಡರಂಗ ಒಗ್ಗಟ್ಟಿನಿಂದ ಇಲ್ಲಿ ಚುನಾವಣೆ ಎದುರಿಸಲಿದೆ ಎಂದು ದೀರ್ಘಕಾಲದಿಂದ ಆಡಳಿತ ನಡೆಸುವ ಸಿಪಿಎಂ ಹಕ್ಕು ಮಂಡಿಸುತ್ತಿದೆಯಾದರೂ ಆ ಪ್ಯಾನಲ್‌ನಲ್ಲಿ ೧೧ ಮಂದಿ ಕೂಡಾ ಸಿಪಿಎಂ ಕಾರ್ಯಕರ್ತರಾಗಿದ್ದಾರೆ. ನಷ್ಟದಲ್ಲಿ ಮುಂದೆ ಸಾಗುತ್ತಿರುವ ಬ್ಯಾಂಕ್‌ಗೆ ಚುನಾವಣೆ ಹೆಸರಲ್ಲಿ ಇನ್ನಷ್ಟು ಲಕ್ಷವನ್ನು ನಷ್ಟ ಮಾಡುವುದನ್ನು ಹೊರತುಪಡಿಸಬೇಕೆಂದೂ ಅದಕ್ಕಾಗಿ ಊರಿನಲ್ಲಿ ಸ್ವಾಧೀನಹೊಂದಿರುವ ಬಿಜೆಪಿ, ಕಾಂಗ್ರೆಸ್, ಮುಸ್ಲಿಂಲೀಗ್, ಸಿಪಿಎಂ ಎಂಬೀ ಪಕ್ಷಗಳಿಗೆ ಒಂದೊಂದು ನಿರ್ದೇಶಕರ ಹುದ್ದೆ ನೀಡಿ ಸ್ಪರ್ಧೆಯನ್ನು ಇಲ್ಲದಂತೆ ಮಾಡಬಹುದೆಂಬ ನಿರ್ದೇಶ ಮೂಡಿ ಬಂದಿದ್ದರೂ ಸಿಪಿಎಂ ನಾಯಕತ್ವ ಅದನ್ನು ಅವಗಣಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ಇತಿಹಾಸದಲ್ಲೇ ಪ್ರಥಮವಾಗಿ ನಾಲ್ವರು ಕಾಂಗ್ರೆಸ್‌ನವರು, ಇಬ್ಬರು ಸ್ವತಂತ್ರರು ಈ ಬಾರಿ ಸ್ಪರ್ಧಾಕಣದಲ್ಲಿ ಸಕ್ರಿಯರಾಗಿದ್ದಾರೆ.
ಸೊಸೈಟಿಯಲ್ಲಿ ಸದಸ್ಯರಾಗಲು ಬರುವವರಿಗೆ ಸದಸ್ಯತನ, ಸಾಲ ಸೌಲಭ್ಯವನ್ನು ನಿಷೇಧಿಸಲಾಗುತ್ತಿದೆ ಎಂದು ಈ ಮೊದಲೇ ಆಡಳಿತ ಸಮಿತಿ ವಿರುದ್ಧ ಆರೋಪವಿದೆ. ಇದರ ಹೊರತು ಸಾಲ ಮಂಜೂರು ಮಾಡುವುದರಲ್ಲಿ ಪಕ್ಷಪಾತ ತೋರಿಸುತ್ತಿರುವುದಾಗಿ ಸಿಪಿಎಂ ಸದಸ್ಯರೂ ದೂರುತ್ತಿದ್ದಾರೆನ್ನಲಾಗಿದೆ. ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ಬ್ಯಾಂಕ್ ಲಾಭದಲ್ಲಿ ಕಾರ್ಯಾಚರಿಸುತ್ತಿಲ್ಲ ಎಂಬ ವ್ಯಾಪಕ ಟೀಕೆಯೂ ಕೇಳಿ ಬರುತ್ತಿದೆ.
ನಾಲ್ವರು ಕಾಂಗ್ರೆಸ್‌ನಿಂದ, ಇಬ್ಬರು ಪಕ್ಷೇತರರಾಗಿ ಸಿಪಿಎಂ ಪ್ಯಾನಲ್ ವಿರುದ್ಧ ಸ್ಪರ್ಧಾ ಕಣದಲ್ಲಿರುವುದಾದರೂ ಇಲ್ಲಿ ಭಾರೀ ಪೈಪೋಟಿ ಕಂಡು ಬರುತ್ತಿದೆ.
ಸಿಪಿಐಯನ್ನು ದೂರವಿಟ್ಟು ಎದುರಿಸಿದ ಸ್ಪರ್ಧೆಯಲ್ಲಿ ಮಂಜೇಶ್ವರ ವಲಯದಲ್ಲಿ ಹಲವು ಸೊಸೈಟಿಗಳ ಆಡಳಿತ ಸಿಪಿಎಂಗೆ ನಷ್ಟ ತಂದಿದೆ. ಮಾತ್ರವಲ್ಲ ಕಾಂಗ್ರೆಸ್- ಲೀಗ್- ಬಿಜೆಪಿ ಎಂಬೀ ಪಕ್ಷಗಳು ಸಿಪಿಎಂನ ಸಹಕಾರಿ ರಾಜಕೀಯದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿವೆ.