ಲೋಕೋಪಯೋಗಿ ರಸ್ತೆಗಳ ಹೊಂಡಗಳನ್ನು ಶೀಘ್ರ ಮುಚ್ಚಲು ಸಚಿವ ರಿಯಾಸ್ ಸೂಚನೆ
ತಿರುವನಂತಪುರ: ಮಳೆಗಾಲದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಕೆಲವು ರಸ್ತೆಗಳಲ್ಲಿ ಉಂಟಾಗುತ್ತಿರುವ ಹೊಂಡಗಳನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಲಾಗಿದೆ ಎಂಬುದನ್ನು ಲೋಕೋಪಯೋಗಿ ನೌಕರರು ಖಚಿತಪಡಿಸಬೇಕೆಂದು ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ತಿಳಿಸಿದರು.ಲೋಕೋಪಯೋಗಿ ರಸ್ತೆಗಳ ಪರಿಪಾಲನೆಯ ಅವಲೋಕನ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ವಿಷಯದಲ್ಲಿ ಯಾವುದೇ ವಿಧದ ಲೋಪ ಉಂಟಾಗಬಾರದು. ರಸ್ತೆಗಳನ್ನು ಹೊಣೆ ವಹಿಸಿಕೊಂಡ ಅಧಿಕಾರಿಗಳು ತಪಾಸಣೆ ನಡೆಸಬೇಕು. ಇದರ ವರದಿಯನ್ನು ಕಾರ್ಯದರ್ಶಿ ಮಟ್ಟದವರೆಗೆ ವಿಮರ್ಶೆಗೊಳಪಡಿಸಬೇಕು ಎಂದು ಸಚಿವರು ಸೂಚಿಸಿದರು.
ಮಳೆ ಕಡಿಮೆಯಾದರೆ ನಿಶ್ಚಿತ ದಿನದೊಳಗೆ ಶಾಶ್ವತ ದುರಸ್ತಿ ಕೆಲಸಗಳನ್ನು ಪೂರ್ತಿಗೊಳಿಸಬೇಕು, ಇದರಲ್ಲಿ ಲೋಪವುಂಟಾದರೆ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಮುನ್ನೆಚ್ಚರಿಕೆ ನೀಡಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ. ಬಿಜು, ಚೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳು ಭಾಗವಹಿಸಿದರು.