‘ವಂದೇ ಭಾರತ್’ ರೈಲಿನಲ್ಲಿ ಅನಿಲ ಸೋರಿಕೆ: ತಪ್ಪಿದ ಭಾರೀ ಅನಾಹುತ
ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿ ಯಲ್ಲಿ ದಿಢೀರ್ ಅನಿಲ ಸೋರಿಕೆ ಉಂಟಾಗಿದ್ದು, ಸಂಭಾವ್ಯ ಭಾರೀ ದೊಡ್ಡ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿದೆ.
ಈ ರೈಲು ಇಂದು ಬೆಳಿಗ್ಗೆ ೭ ಗಂಟೆಗೆ ತಿರುವನಂತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿತ್ತು. ಅದು ಕಳಮಶ್ಶೇರಿ- ಆಲುವಾ ರೈಲು ನಿಲ್ದಾಣ ನಡುವೆ ತಲುಪಿದ ವೇಳೆ ಅದರ ಸಿ-೫ ಬೋಗಿಯಲ್ಲಿ ದಿಢೀರ್ ಆಗಿ ಹೊಗೆ ಕಾಣಿಸಿಕೊಂಡಿದೆ. ಆಗ ಅದರಲ್ಲಿದ್ದ ಪ್ರವಾಸಿಗರು ಒಮ್ಮೆಲೇ ಭಯಭೀತರಾದರು. ಆಗ ಅವರಿಗೆ ಉಸಿರಾಟ ತೊಂದರೆಯೂ ಅನುಭವಗೊಳ್ತೊಡಗಿತು. ತಕ್ಷಣ ರೈಲನ್ನು ಆಲುವಾದಲ್ಲಿ ನಿಲ್ಲಿಸಲಾಯಿತು. ಹೆದರಿದ ಪ್ರಯಾಣಿಕರು ತಕ್ಷಣ ರೈಲಿನಿಂದ ಶರವೇಗದಲ್ಲಿ ಹೊರಗಿಳಿದರು. ಬಳಿಕ ನಡೆಸಿದ ತಪಾಸಣೆಯಲ್ಲಿ ರೈಲಿನಲ್ಲಿ ಅನಿಲ ಸೋರಿಕೆ ಉಂಟಾಗಿರುವುದು ಪತ್ತೆಹಚ್ಚಲಾಗಿದೆ.
ಸಿ-೫ ರೈಲು ಬೋಗಿಯ ಏರ್ ಕಂಡೀಷನ್ ಯಂತ್ರದಿಂದ ಅನಿಲ ಸೋರಿಕೆ ಉಂಟಾಗಿದೆ ಎಂದು ಈ ಬಗ್ಗೆ ರೈಲ್ವೇ ಇಲಾಖೆಯ ತಜ್ಞ ಇಂಜಿನಿಯರ್‌ಗಳು ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ಪತ್ತೆಹಚ್ಚಲಾಗಿದೆ. ಅಡುಗೆ ಅನಿಲ ಸೋರಿಕೆಯನ್ನು ತಡೆಗಟ್ಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ರೈಲುಸೇವೆ ಮುಂದುವರಿಸಲಾಯಿತು. ರೈಲು ಪ್ರಯಾಣಿಕ ರೆಲ್ಲರೂ ಸುರಕ್ಷಿತರಾಗಿ ದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.