ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿದವರಿಗೆ ಅಸೌಖ್ಯ 5 ಮಂದಿ ಆಸ್ಪತ್ರೆಯಲ್ಲಿ ದಾಖಲು
ಕಾಸರಗೋಡು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಾಡಿಯಲ್ಲಿ ನಿನ್ನೆ ಆಹಾರ ಸೇವಿಸಿದ ತಿರುವನಂತಪುರ ನಿವಾಸಿಗಳಾದ ಐದು ಮಂದಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಿರುವನಂತಪುರ ಮಂಗಲಪುರದ ಮುಹಮ್ಮದ್ ಶಾದುಲಿ (21), ಮುಹಮ್ಮದ್ ಶಿಬಿಲಿ (25), ನಜ್ಮಾ (50), ದಿ| ಕೃಷ್ಣನ್ ನಾಯರ್‌ರ ಪುತ್ರಿ ಕೃಷ್ಣ ಕುಮಾರಿ (45), ಕೃಷ್ಣ ಕುಮಾರಿಯ ಪುತ್ರಿ ಗೌರಿ ಕೃಷ್ಣ (23) ಎಂಬಿವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಗೋವಾದಿಂದ ಮಂಗಳೂರಿಗೆ ಬರುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಇವರು ಪ್ರಯಾಣಿಸಿದ್ದರೆಂದು ಹೇಳಲಾಗಿದೆ. ರೈಲಿನಲ್ಲಿ ವಿತರಿಸಿದ ಫ್ರೈಡ್ ರೈಸ್ ಹಾಗೂ ತರಕಾರಿ ಪದಾರ್ಥ ಸೇವಿಸಿದ ಇವರಿಗೆ ಅಸೌಖ್ಯ ಕಾಣಿಸಿಕೊಂಡಿದೆ. ಇದೇ ವೇಳೆ ಚಪಾತಿ ಹಾಗೂ ಪದಾರ್ಥ ಸೇವಿಸಿದವರಿಗೆ ಯಾವುದೇ ಅಸೌಖ್ಯ ಉಂಟಾಗಿಲ್ಲವೆನ್ನಲಾಗಿದೆ. ಮಂಗಳೂರಿನಿಂದ ತಿರುವನಂತಪುರ -ಪೋರ್‌ಬಂದರ್ ಎಕ್ಸ್‌ಪ್ರೆಸ್‌ನಲ್ಲಿ ತಿರುವನಂತಪುರಕ್ಕೆ ತೆರಳಲು ಪ್ರಯಾಣಿಸಿದ ಇವರಿಗೆ ವಾಂತಿ ಸಹಿತ ಅಸೌಖ್ಯ ಉಂಟಾಗಿದೆ. ಈ ವಿಷಯವನ್ನು ಕಾಸರಗೋಡಿಗೆ ತಲುಪಿದ ಬಳಿಕ ಇವರು ರೈಲ್ವೇ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಅವರನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇವರ ಜೊತೆಗೆ ಇನ್ನೊಬ್ಬರಿಗೂ ಅಸ್ವಸ್ಥತೆ ಉಂಟಾ ಗಿರುವುದಾಗಿ ಹೇಳಲಾಗುತ್ತಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದವರ ಪೈಕಿ ಇಬ್ಬರು ತಿರುವನಂತಪುರದಲ್ಲಿ ಸರಕಾರಿ ನೌಕರರಾಗಿದ್ದಾರೆ. ಆದರೆ ದೂರು ನೀಡಿ ಅದರ ಹಿಂದೆ ಓಡಾಡಬೇಕಾಗಿ ಬರಲಿದೆಯೆಂಬ ಕಾರಣದಿಂದ ಇವರು ದೂರು ನೀಡಿಲ್ಲವೆಂದು ಹೇಳಲಾಗುತ್ತಿದೆ.