ವನ್ಯಜೀವಿಗಳ ಬೇಟೆಯಾಡಿದ ತಂಡ ಸೆರೆ ಬಂದೂಕು, ಗುಂಡು, ಎರಡು ಬೈಕ್ ವಶ
ಕಾಸರಗೋಡು: ಸರಕಾರಿ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಗ್ಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದ ಬೇಟೆಗಾರರ ತಂಡವೊಂದನ್ನು ಅರಣ್ಯ ಪಾಲಕರು ಬಂಧಿಸಿದ್ದಾರೆ. ಇವರಿಂದ ಎರಡು ಬಂದೂಕುಗಳು ಆರು ಗುಂಡಾಗಳು ಮತ್ತು ಅವರು ಬಂದಿದ್ದ ಎರಡು ಬೈಕ್ ಗಳನ್ನು ಅರಣ್ಯ ಪಾಲಕರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಜಪುರಂಗೆ ಸಮೀಪದ ಪಾಣತ್ತೂರು ಕೋಳಿಚ್ಚಾಲ್ ನಿವಾಸಿ ನಾರಾಯಣನ್ (45), ಪಾಣತ್ತೂರು ಕರಿಕ್ಕೆ ನಿವಾಸಿಗಳಾದ ನಿಶಾಂತ್ (38) ಮತ್ತು ಮಹೇಶ್ (30) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಆ ವೇಳೆ ಇವರ ಜತೆಗಿದ್ದ ಅನೀಶ್ ಮತ್ತು ಪ್ರಶಾಂತ್ ಎಂಬವರು ಪರಾರಿಯಾಗಿರುವುದಾಗಿಯೂ, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಣತ್ತೂರು ಕಮ್ಮಾಡಿಯ ಸರಕಾರಿ ರಕ್ಷಿತಾರಣ್ಯದಲ್ಲಿ ಪನತ್ತಡಿ ಅರಣ್ಯ ವಿಭಾಗದ ತಂಡ ನಿನ್ನೆ ಬೆಳಿಗ್ಗೆ ಕ್ಲೀನ್ ಪನತ್ತಡಿ ಆಪರೇಷನ್ ಕಾರ್ಯಾಚರಣೆ ಆರಂಭಿಸಿತ್ತು. ಆ ವೇಳೆ ಅಲ್ಲಿ ವನ್ಯಜೀವಿಗಳ ಬೇಟೆಗಾಗಿ ಬಂದ ತಂಡ ಪತ್ತೆಯಾಗಿದೆ. ಆ ಕೂಡಲೇ ನಡೆಸಲಾದ ಸಕಾಲಿಕ ಕಾರ್ಯಾಚರಣೆಯಲ್ಲಿ ಆ ತಂಡದಲ್ಲಿದ್ದ ಮೂವರನ್ನು ಸೆರೆ ಹಿಡಿದು ಬಂದೂಕು, ಗುಂಡು, ಬೈಕ್‌ಗಳನ್ನು ವಶಪಡಿಸಲಾಯಿತೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪನತ್ತಡಿ ಸೆಕ್ಷನ್ ಫೋರೆಸ್ಟ್ ಆಫೀಸರ್ ಬಿ. ಶೇಷಪ್ಪರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಬೀಟ್ ಆಫೀಸರ್‌ಗಳಾದ ಎಂ.ವಿ. ಅಭಿಜಿತ್, ವಿ. ವಿನೀತ್, ಮಂಜುಷಾ, ವಿಮಲ್ ರಾಜ್, ವಾಚರ್‌ಗಳಾದ ಶರತ್, ಸೆಲ್‌ಜೋ ಮತ್ತು ರತೀಶ್ ಎಂಬಿವರು ಈ ತಂಡದಲ್ಲಿ ಒಳಗೊಂಡಿದ್ದರು.