ವಯನಾಡು ದುರಂತದ ಪ್ರಭಾವ ಕೇಂದ್ರ ಪತ್ತೆ
ವಯನಾಡು: ಇಡೀ ಕೇರಳವನ್ನೇ ನಡುಗಿಸಿದ ಅತೀ ಭೀಕರ ದುರಂತದ ಪ್ರಭಾವ ಕೇಂದ್ರವನ್ನು ಐಎಸ್‌ಆರ್‌ಒ ಪತ್ತೆಹಚ್ಚಿದೆ. ಪ್ರಭಾವ ಕೇಂದ್ರ ಸಮುದ್ರ ಮಟ್ಟಕ್ಕಿಂತಲೂ 1550 ಆಗಿದೆಯೆಂದು ಐಎಸ್‌ಆರ್‌ಒ ಹೊರಬಿಟ್ಟ ಮಾಹಿತಿಯಲ್ಲಿ ತಿಳಿಸಲಾಗಿದೆ. ಪ್ರಭಾವ ಕೇಂದ್ರದ ವ್ಯಾಪ್ತಿ 86 ಸಾವಿರ ಸ್ಕ್ವಾರ್ ಫೀಟ್ ಆಗಿದೆ. ಭೂಕುಸಿತದಿಂದ ಮಲೆಗಳ ಕಗ್ಗಲ್ಲು ಬಂಡೆಗಳು ಕುಸಿದು 8 ಕಿಲೋ ಮೀಟರ್ ತನಕ ಪ್ರವಾಹದಲ್ಲಿ ಸಾಗಿದ್ದು ಇದುವೇ ಭಾರೀ ಸಾವುನೋವುಗಳಿಗೆ ಕಾರಣ ವಾಗಿದೆಯೆಂದು ಐಎಸ್‌ಆರ್‌ಒ ವರದಿಯಲ್ಲಿ ತಿಳಿಸಿಲಾಗಿದೆ. ಈ ಕುರಿತಾದ ಭೂಪಟವನ್ನೂ ಐಎಸ್‌ಆರ್‌ಒ ಪ್ರಕಟಿಸಿದೆ.
ಭೂಕುಸಿತದಿಂದ ಮಣ್ಣಿನಡಿ ಇನ್ನೂ ಜೀವಂತವಾಗಿರುವವರ ಸಾಧ್ಯತೆ ವಿರಳವಾಗಿದೆಯೆಂದು ರಕ್ಷಾ ಕಾರ್ಯಾಚರಣೆಗೆ ನೇತೃತ್ವ ನೀಡುತ್ತಿರುವ ತಂಡದ ಮುಖ್ಯಸ್ಥರು ತಿಳಿಸುತ್ತಾರೆ. ಮಣ್ಣಿನಡಿ ಇನ್ನೂ ಹಲವು ಮಂದಿ ಸಿಲುಕಿಕೊಂಡಿರುವ ಶಂಕೆಯುಂಟಾಗಿದೆ. ಅವರ ಪತ್ತೆಗಾಗಿ 40 ತಂಡಗಳನ್ನು ರಚಿಸಲಾಗಿದೆ. ದುರಂತ ಪ್ರದೇಶವನ್ನು ಆರು ವಲಯಗಳಾಗಿ ವಿಂಗಡಿಸಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. ಭಾರತೀಯ ಸೇನಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಡಿಎಸ್‌ಜಿ, ಕೋಸ್ಟ್ ಗಾರ್ಡ್ ನೌಕಾಪಡೆ, ಎಂಇಜಿ ಸಂಯುಕ್ತವಾಗಿ ಸತತ ನಾಲ್ಕನೇ ದಿನವೂ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ಭೂ ಕುಸಿತದಿಂದ ಸಾವಿನ ಸಂಖ್ಯೆ 291ಕ್ಕೇರಿದೆ. 206 ಮಂದಿ ಇನ್ನೂ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿರುವ ಶೋಧ ಭರದಿಂದ ಸಾಗುತ್ತಿದೆ.