ವಯನಾಡು ದುರಂತ: ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದ ವಿಧಾನಸಭೆ
ತಿರುವನಂತಪುರ: ಹದಿನೈದನೇ ವಿಧಾನಸಭೆಯ 12ನೇ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿತು. ವಯನಾಡು ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಾಗಿ ನಡೆದ ಭೂಕುಸಿತದಿಂದ ಪ್ರಾಣ ನಷ್ಟ ಹೊಂದಿದವರಿಗೆ ಅಧಿವೇಶನ ಶ್ರದ್ಧಾಂಜಲಿ ಸಲ್ಲಿಸಿತು.
ವಿಧಾನಸಭಾ ಅಧ್ಯಕ್ಷ ಎ.ಎನ್. ಸಂಶೀರ್ ಅವರು ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು. ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಸೊತ್ತು ಹಾಗೂ ಇತರ ಸಂತ್ರಸ್ತರಿಗೆ ಅರ್ಹವಾದ ರೀತಿಯ ಪುನರ್ವಸತಿ ಯೋಜನೆಯನ್ನು ಸರಕಾರ ಶರವೇಗದಲ್ಲಿ ನಡೆಸುತ್ತಿದೆ. ಈ ಭೀಕರ ದುರಂತದ ಮುಖವನ್ನು ಜನರ ಮುಂದೆ ತಂದ ಸುದ್ಧಿ ಮಾಧ್ಯಮಗಳಿಗೂ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ವಯನಾಡು ದುರಂತದಲ್ಲಿ 231 ಮಂದಿ ಸಾವನ್ನಪ್ಪಿದ್ದಾರೆ. 14 ಮಂದಿ ನಾಪತ್ತೆಯಾಗಿದ್ದಾರೆ. 145 ಮನೆಗಳು ಪೂರ್ಣವಾಗಿ, 170 ಮನೆಗಳು ಆಂಶಿಕವಾಗಿ ಹಾನಿಗೊಂಡಿದೆ. 240 ಮನೆಗಳು ವಾಸಯೋಗ್ಯವಲ್ಲದಂತಾಗಿದೆ.
ಈ ದುರಂತದಲ್ಲಿ ಒಟ್ಟಾರೆಯಾಗಿ 1200 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ತಿಳಿಸಿದರು. ವಯನಾಡಿನ ಹೊರತಾಗಿ ಕಲ್ಲಿಕೋಟೆ ಜಿಲ್ಲೆಯಲ್ಲಿಯೂ ಭೂಕುಸಿತ ಉಂಟಾಗಿದೆ. ಇದು ಓರ್ವರ ಪ್ರಾಣ ಕಸಿದುಕೊಂಡಿದೆ.
ಹಲವು ಮನೆಗಳು, ಅಂಗಡಿಗಳು ನಾಶಗೊಂಡಿವೆ. ಹಲವು ಸಾಕುಪ್ರಾಣಿಗಳೂ ಸತ್ತಿವೆಯೆಂದು ಸಿ.ಎಂ ತಿಳಿಸಿದ್ದಾರೆ. ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.