ವಯಸ್ಸು 24, ಕಳವು ಪ್ರಕರಣ 24 : ಕಾಞಂಗಾಡ್ ನಿವಾಸಿ ಪರಿಯಾರಂನಲ್ಲಿ ಸೆರೆ

ಹೊಸದುರ್ಗ: ಪರಿಯಾರಂನ ಎರಡು ಮನೆಗಳಲ್ಲಿ ಕಳವು ನಡೆಸಿದ ಕುಖ್ಯಾತ ಕಳ್ಳನನ್ನು ನಾಲ್ಕನೇ ದಿನ ಬಂಧಿಸಲಾಗಿದೆ. ಈತನಿಗೆ 24 ವರ್ಷವಾದರೂ 24 ಕಳವು ಪ್ರಕರಣಗಳಲ್ಲಿ ಈತ ಆರೋಪಿ ಯಾಗಿದ್ದಾನೆ. ಕಾಞಂಗಾಡ್ ಗಾರ್ಡನ್‌ವಳಪ್‌ನ ಪಿ.ಎಚ್. ಅಸೀಫ್ (24)ನನ್ನು ಪಯ್ಯನ್ನೂರು ಡಿವೈಎಸ್‌ಪಿ ವಿನೋದ್‌ರ ಮೇಲ್ನೋಟದಲ್ಲಿ ಪರಿಯಾರಂ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಪಿ. ವಿನೀಶ್ ಕುಮಾರ್ ಮತ್ತು ತಂಡ ಬಂಧಿಸಿದೆ. ಹೊಸದುರ್ಗ ಪೊಲೀಸರು  ಕಾಪಾ ಹೊರಿಸಿ ಬಂಧಿಸಿ ಜೈಲಿನಲ್ಲಿರಿಸಿದ ಆಸಿಫ್ ಇತ್ತೀಚೆಗೆ ಬಿಡುಗಡೆಗೊಂಡಿದ್ದನು. ಚೆರುತಾಳಂ ಕಕ್ಕೋಣಿಯ ಕುಟ್ಟಿ ತರವಾಡ್‌ನ ಕೆ. ರಾಜನ್, ಕುನ್ನುಮಲ್ ಸಾವಿತ್ರಿ ಎಂಬವರ ಮನೆಯಿಂದ ಫೆ. ೧೪ರಂದು ನಡೆಸಿದ ಕಳವು ಪ್ರಕರಣಗಳಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ.

ಮೊಬೈಲ್ ಫೋನ್, ಬೈಕ್ ಉಪಯೋಗಿಸುವ ಹವ್ಯಾಸ ಅಸೀಫ್‌ಗಿಲ್ಲ. ರೈಲುಗಳಲ್ಲಿ, ಬಸ್‌ಗಳಲ್ಲಿ ಈತ ಸಂಚರಿಸಿ ಕಳವು ನಡೆಸುವ ಸ್ಥಳವನ್ನು ಪತ್ತೆ ಮಾಡಿ ಒಳ ರಸ್ತೆಗಳಲ್ಲಿ ನಡೆದು ಹೋಗುವುದು ಇವನ ರೀತಿ. ಆ ಪರಿಸರದಲ್ಲಿ ಎಲ್ಲಾದರೂ ಬೀಗ ಹಾಕಿದ ಮನೆಯನ್ನು ಕಂಡರೆ ಅಲ್ಲಿಂದ ಕಳವು ನಡೆಸಿ ಪರಾರಿಯಾಗುವುದು ಈತನ ರೀತಿ.

ರಾಜನ್‌ರ ಮನೆಯಿಂದ ೪ ಪವನ್ ಚಿನ್ನ, ೨೩,೦೦೦ ರೂ. ಕಳವುಗೈದಿದ್ದಾನೆ. ಸಾವಿತ್ರಿಯ ಮನೆಯಿಂದ ೧೮,೦೦೦ ರೂ, ಎರಡೂವರೆ ಪವನ್ ಚಿನ್ನಾಭರಣ ಕಳವು ನಡೆಸಿದ್ದನು. ಈತ ನಡೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ  ಸೆರೆಯಾಗಿದ್ದು, ಇದನ್ನು ಪರಿಶೀಲಿಸಿ ಕಳ್ಳನನ್ನು ಸೆರೆ ಹಿಡಿಯಲಾಗಿದೆ.

Leave a Reply

Your email address will not be published. Required fields are marked *

You cannot copy content of this page