ವರ್ಕಾಡಿ ಆರಾಧನಾಲಯ, ವ್ಯಾಪಾರ ಸಂಸ್ಥೆಯಿಂದ ಕಳವುಗೈದ ಆರೋಪಿ ಸೆರೆ
ಮಂಜೇಶ್ವರ: ಆರಾಧನಾಲಯ ಹಾಗೂ ವ್ಯಾಪಾರ ಸಂಸ್ಥೆಯಿಂದ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಅತೀ ಸಾಹಸಿಕ ರೀತಿಯಲ್ಲಿ ಮಲಪ್ಪುರಂನಿಂದ ಸೆರೆ ಹಿಡಿದಿದ್ದಾರೆ. ಕರ್ನಾಟಕದ ಚಿಕ್ಕಮಗಳೂರು ಕೃಷ್ಣನಗರ ನಿವಾಸಿ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (42) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಂಜೇಶ್ವರ ಎಸ್‌ಐ ರತೀಶ್, ಎಸ್‌ಸಿಪಿಒ ಪ್ರಮೋದ್, ಸಿಪಿಒಗಳಾದ ಪ್ರಣವ್, ಸಂದೀಪ್ ಎಂಬಿವರನ್ನೊಳಗೊಂಡ ತಂಡ ಆರೋಪಿಯನ್ನು ಮಲಪ್ಪುರಂನ ಅಮರಂಬಲಂ ಎಂಬಲ್ಲಿಂದ ಸೆರೆ ಹಿಡಿದಿದೆ. ಇತ್ತೀಚೆಗೆ ವರ್ಕಾಡಿ ಬಜಿಲಕರಿಯ ಎಂಬಲ್ಲಿನ ಬಾಲ ಏಸು ಪ್ರಾರ್ಥನ ಮಂದಿರ, ಪಾವಳದಲ್ಲಿ ಶ್ರೀ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಮೂರುಗೋಳಿ ಸಮೀಪ ಪಾಡಿ ಎಂಬಲ್ಲಿ ಒಂದು ಅಂಗಡಿಯಿಂದ ಕಳವು ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಆರೋಪಿಯ ಕುರಿತು ಸುಳಿವು ಲಭಿಸಿತ್ತು. ಇದರಿಂದ ಈತನ ಮೇಲೆ ನಿಗಾ ಇರಿಸಿದ್ದು, ಈ ವೇಳೆ ಮಲಪ್ಪುರಂನಲ್ಲಿರುವುದಾಗಿ ತಿಳಿದು ಬಂದಿತ್ತು. ಇದರಂತೆ ನಿನ್ನೆ ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಮಂಜೇಶ್ವರ ಠಾಣೆಗೆ ತಲುಪಿಸಿದ್ದು, ಸಮಗ್ರ ತನಿಖೆ ನಡೆಸಿದ ಬಳಿಕ ನ್ಯಾಯಾಲ ಯದಲ್ಲಿ ಹಾಜರುಪಡಿ ಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದ ಇತರ ಕಳವು ಪ್ರಕರಣಗಳಲ್ಲೂ ಈತ ಭಾಗಿಯಾಗಿದ್ದಾನೆಯೇ ಎಂದು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.