ವರ್ಕಾಡಿ: ಕುಟುಂಬಶ್ರೀ ಸಾಲಕ್ಕೆ ಸಂಬಂಧಿಸಿದ ವಿವಾದದಲ್ಲಿ ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ಸಿಡಿಎಸ್ ಚೆಯರ್ ಪರ್ಸನ್ ಹಾಗೂ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆ ಅಸಭ್ಯ ಬೈಗುಳ, ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿದ್ದಾರೆ. ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ನಿನ್ನೆ ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿದೆ. ಸಿಡಿಎಸ್ ಚೆಯರ್ ಪರ್ಸನ್ ವಿಜಯಲಕ್ಷ್ಮಿಯ ದೂರಿನಂತೆ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಾವೂರಿನ ರಾಜ್‌ಕುಮಾರ್ ಶೆಟ್ಟಿ, ರಕ್ಷಣ್ ಅಡೆಕಳ, ಭಾಸ್ಕರ ಪೊಯ್ಯೆ, ಯತಿರಾಜ್, ಮಣಿಕಂಠ, ಉದಯ ಎಂಬಿವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಸಿಡಿಎಸ್ ಅಧ್ಯಕ್ಷೆ ವಿಜಯಲಕ್ಷ್ಮಿ, ಕಚೇರಿ ಅಕೌಂಟೆಂಟ್ ಉದಯಕುಮಾರ್, ನೌಕರರಾದ ಪ್ರಭಾವತಿ, ಸವಿತ, ನಿಕ್ಷಿತ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.