ವರ್ಕಾಡಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಸಹಿತ ಮೂವರನ್ನು ಪಕ್ಷದಿಂದ ವಜಾ
ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಐಕ್ಯರಂಗದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಸದಸ್ಯರಿಗೆ ಬೆಂಬಲ ನೀಡುವ ಹರ್ಷಾದ್ ವರ್ಕಾಡಿ, ಎಸ್. ಅಬ್ದುಲ್ ಖಾದರ್ ಹಾಜಿ, ಹಾರೀಸ್ ಮಚ್ಚಂಪಾಡಿ ಪಳ್ಳಂ ಎಂಬಿವರನ್ನು ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆ ಎಂದು ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ, ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ವಿ. ಸೋಮಪ್ಪ ತಿಳಿಸಿದ್ದಾರೆ. ನಾಳೆ ಬ್ಯಾಂಕ್ನ ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಕಾಂಗ್ರೆಸ್- ಲೀಗ್- ಸಿಪಿಎಂ ಒಂದು ಒಕ್ಕೂಟ ವಾಗಿ ಸ್ಪರ್ಧಿಸುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ನ ಬಣವೊಂದು ಬಿಜೆಪಿ ಬೆಂಬಲದಲ್ಲಿ ಸ್ಪರ್ಧಿಸುತ್ತಿದೆ. ಇದಕ್ಕೆ ನೇತೃತ್ವ ನೀಡಿದ ಮೂವರನ್ನು ಕಾಂಗ್ರೆಸ್ನಿಂದ ವಜಾಗೈಯ್ಯಲಾಗಿದೆ. ಇದೇ ವೇಳೆ ಬ್ಯಾಂಕ್ನಲ್ಲಿ ಇತ್ತೀಚೆಗೆ ನಡೆದ ನೇಮಕಾತಿ ಸಂಬಂಧಿಸಿದ ವಿವಾದವೂ ತೀವ್ರವಾಗಿದೆ.
ಕಾಂಗ್ರೆಸ್ ನಾಯಕತ್ವ ಬಿಜೆಪಿ ವಿರುದ್ಧ ನಿಲುವು ಕೈಗೊಂಡಿರುವಾಗ ವರ್ಕಾಡಿಯಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿಯೊಂದಿಗೆ ಸೇರಿ ಸ್ಪರ್ಧಿ ಸುತ್ತಿರುವುದು ಕಾಂಗ್ರೆಸ್ಗೆ ಇರಿಸುಮುರಿಸು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟನೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಶರತ್ಲಾಲ್-ಕೃಪೇಶ್ರನ್ನು ಕೊಲೆಗೈದ ಪಕ್ಷದೊಂದಿಗೆ ಮೈತ್ರಿ ಮಾಡಿ ಸ್ಪರ್ಧಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಭಿನ್ನಮತೀಯರು ಬಿಜೆಪಿಯೊಂದಿಗೆ ಸೇರಿ ಚುನಾವಣೆ ರಂಗಕ್ಕಿಳಿದಿದ್ದಾರೆ. ಇದು ವರ್ಕಾಡಿಯಲ್ಲಿ ಭಾರೀ ಚರ್ಚೆಗೆ ಕಾರ ಣವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪ್ರತಿಕ್ರಿಯೆ ಉಂಟುಮಾಡಲಿದೆ ಎನ್ನಲಾಗಿದೆ.