‘ವರ್ಕ್ ಫ್ರಮ್ ಹೋಮ್’: ಕಾಸರಗೋಡಿನ ವೈದ್ಯನ 2.23 ಕೋಟಿ ರೂ. ಎಗರಿಸಿದ ಪ್ರಕರಣದ ಆರೋಪಿ ಸೆರೆ; ವಿದೇಶ ನಂಟು ಬಯಲು
ಕಾಸರಗೋಡು: ‘ವರ್ಕ್ ಫ್ರಮ್ ಹೋಮ್’ ಎಂಬ ಹೆಸರಲ್ಲಿ ಹಾಗೂ ಆನ್‌ಲೈನ್ ಟ್ರೇಡಿಂಗ್‌ನ ಮೂಲಕ ಹಲವರಿಂದಾಗಿ ಕೋಟಿಗಟ್ಟಲೆ ರೂ. ಎಗರಿಸಿದ ಪ್ರಕರಣದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಪಯ್ಯನ್ನೂರು ಕವ್ವಾಯಿ ಎ.ಟಿ. ಹೌಸ್‌ನ ಎ.ಟಿ. ಮೊಹಮ್ಮದ್ ನೌಶಾದ್ (45) ಬಂಧಿತ ಆರೋಪಿ. ಕಾಸರಗೋಡಿನ ವೈದ್ಯರೋರ್ವರಿಂದ 2.23 ಕೋಟಿ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ಅವರು ನೀಡಿದ ನಿರ್ದೇಶ ಪ್ರಕಾರ ಸೈಬರ್ ಪೊಲೀಸರ ಸಹಾಯದೊಂದಿಗೆ ಕಾಸರಗೋಡು ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಟಿ. ಉತ್ತಮ್‌ದಾಸ್‌ರ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾನು ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದೇನೆಂದು ಹೇಳಿ ವೀಡಿಯೋ ಕಾಲ್ ಮೂಲಕ ಬೆದರಿಸಿ ಹಣ ಎಗರಿಸಿರುವುದಾಗಿ ಆರೋಪಿಸಿ ಎರ್ನಾಕುಳಂ ನಿವಾಸಿಯೋರ್ವ ನೀಡಿದ ದೂರಿನಂತೆ ಎರ್ನಾಕುಳಂ ಇನ್ಫೋಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೇಸು ನೆಲೆಗೊಂಡಿದ್ದು, ಅದಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರೂ ಆರೋಪಿಯ ಪತ್ತೆಗಾಗಿ ಇನ್ನೊಂದೆಡೆ ಶೋಧ ಆರಂಭಿಸಿದ್ದರು.
ಉತ್ತರ ಭಾರತದ ಸೈಬರ್ ವಂಚನೆ ತಂಡದೊಂದಿಗೆ ನಂಟು ಹೊಂದಿರುವ ಈ ಆರೋಪಿ ಈ ತನಕ ತಲೆಮರೆಸಿ ಕೊಂಡು ಜೀವಿಸುತ್ತಿದ್ದನು. ಆತನ ಮೇಲೆ ಕಾಸರಗೋಡು ಸೈಬರ್ ಸೆಲ್ ಪೊಲೀಸರು ನಿರಂತರ ನಿಗಾ ಇರಿಸಿದ್ದರು. ಆನ್‌ಲೈನ್ ಟ್ರೇಡಿಂಗ್ ಮೂಲಕ ಅಮಿತ ಲಾಭ ನೀಡುವುದಾಗಿ ನಂಬಿಸಿ ಈತ ಜನರನ್ನು ತನ್ನ ಬಲೆಗೆ ಬೀಳಿಸಿ ವಂಚನೆ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್ ಮೂಲಕ ನಡೆಸಲಾದ ಎರಡು ವಂಚನಾ ಪ್ರಕರಣಗಳು ಈತನ ವಿರುದ್ಧ ಪಯ್ಯ ನ್ನೂರು ಪೊಲೀಸ್ ಠಾಣೆಯಲ್ಲೂ ದಾಖ ಲುಗೊಂಡಿದೆ. ಆತನನ್ನು ಅಲ್ಲಿನ ನ್ಯಾಯಾ ಲಯ ತಲೆಮರೆಸಿಕೊಂಡಿರುವ ಆರೋ ಪಿಯನ್ನಾಗಿಯೂ ಘೋಷಿಸಿತ್ತು. ಇದು ಮಾತ್ರವಲ್ಲದೆ, ಕಾಸರಗೋಡು, ಕುಂಬಳೆ ಮತ್ತು ಕಣ್ಣೂರಿನ ಪೆಂಙೋಮ್ ಪೊಲೀಸ್ ಠಾಣೆಗಳಲ್ಲೂ ಈತನ ವಿರುದ್ಧ ಕೇಸುಗಳಿವೆ. ಈತ ಇತರ ದೇಶಗಳನ್ನು ಕೇಂದ್ರೀಕರಿಸಿ ಸಮಾನ ರೀತಿಯ ವಂಚನೆ ನಡೆಸಿರುವ ಬಗ್ಗೆಯೂ ತನಿಖೆಯಲ್ಲಿ ಸ್ಪಷ್ಟ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಂತ ಹೆಸರಲ್ಲಿ ಬ್ಯಾಂಕ್ ಖಾತೆ ಹೊಂದದ ಆರೋಪಿ
ಬಂಧಿತ ಆರೋಪಿ ಆತನ ಸ್ವಂತ ಹೆಸರಲ್ಲಿ ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲವೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಇತರರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅದರ ಮೂಲಕ ತನ್ನ ಆರ್ಥಿಕ ವ್ಯವಹಾರ ನಡೆಸುವುದು ಈತನ ವಂಚನಾ ರೀತಿಯಾಗಿದೆ. ಆತನ ವಿರುದ್ಧ ದೂರು ನೀಡಿದ ಕಾಸರಗೋಡಿನ ವೈದ್ಯರಿಂದ 2024 ಮೇ 17ರಿಂದ ಜೂನ್ ೪ರ ನಡುವಿನ ಅವಧಿಯಲ್ಲಿ ಟೆಲಿಗ್ರಾಂ ಮತ್ತು ಫೋನ್ ಮೂಲಕ ಸಂಪರ್ಕಿಸಿ ‘ವರ್ಕ್ ಫ್ರಮ್ ಹೋಮ್’ ಹೆಸರಲ್ಲಿ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ಭರವಸೆ ನೀಡಿ ಅವರಿಂದ ಆರೋಪಿ ತನ್ನ ಬ್ಯಾಂಕ್ ಖಾತೆಗೆ ೨.೨೩ ಕೋಟಿ ರೂ. ಪಡೆದು ಬಳಿಕ ವಂಚನೆ ಗೈದಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ.