ವರ್ಣರಂಜಿತ ಶಾಲಾ ಪ್ರವೇಶೋತ್ಸವ: 1ನೇ ತರಗತಿಗೆ 2.44 ಲಕ್ಷ ಪುಟಾಣಿಗಳ ಪ್ರವೇಶ

ಕಾಸರಗೋಡು: ಎರಡು ತಿಂಗಳು ಬೇಸಿಗೆ ರಜಾ ಅವಧಿ ಮುಗಿದು 2024-25ನೇ ಶೈಕ್ಷಣಿಕ ವರ್ಷ ಇಂದು ಬೆಳಿಗ್ಗೆ ಶುಭಾರಂಭಗೊAಡಿದೆ. ಒಂದನೇ ತರಗತಿಗೆ ರಾಜ್ಯದಲ್ಲಿ ಒಟ್ಟಾರೆಯಾಗಿ 2,44,656 ಮಂದಿ ಪುಟಾಣಿಗಳು ಇಂದು ಹೊಸದಾಗಿ ಶೈಕ್ಷಣಿಕ ಜೀವನಕ್ಕೆ ಪ್ರವೇಶಿಸಿದ್ದಾರೆ. ಇಂದು ಶಾಲೆಗಳಲ್ಲಿ ಏರ್ಪಡಿಸಲಾದ ಅದ್ದೂರಿಯ ಹಾಗೂ ವರ್ಣರಂಜಿತ ಪ್ರವೇಶೋತ್ಸವಗಳೊಂದಿಗೆ ಈ ಪುಟಾಣಿಗಳಿಗೆ ಹಾರ್ದಿಕ ಸ್ವಾಗತ ನೀಡಲಾಯಿತು. ಆ ಮೂಲಕ ಪುಟಾಣಿಗಳು ಲವಲವಿಕೆಯಿಂದ ತಮ್ಮ ಹೊಸ ಶೈಕ್ಷಣಿಕ ಜೀವನಕಕೆ ಪದಾರ್ಪಣೆಗೈದರು.
ಒಂದನೇ ತರಗತಿಗೆ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವತಿಯಿಂದ ಈ ರೀತಿ ಸ್ವಾಗತ ನೀಡಲಾಯಿತು. ವಿದ್ಯಾರ್ಥಿಗಳಿಗೆಲ್ಲಾ ಸಿಹಿ ತಿಂಡಿ, ಹೂಗಳು ಮತ್ತು ಆಟಿಕೆಗಳನ್ನು ನೀಡಿ ಸ್ವಾಗತಿಸಲಾಯಿತು.
ಪ್ರವೇಶೋತ್ಸವದ ರಾಜ್ಯ ಮಟ್ಟದ ಉದ್ಘಾಟನೆಯನ್ನು ಎರ್ನಾಕುಳಂ ವಳಮಕರ ಸರಕಾರಿ ಹೈಸ್ಕೂಲಿನಲ್ಲಿ ಇಂದು ಬೆಳಿಗ್ಗೆ ನಡೆದ ಅದ್ದೂರಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿದರು. ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಜಿಲ್ಲಾ ಮಟ್ಟದ ಪ್ರವೇಶೋತ್ಸವ ಇಂದು ಬಲ್ಲಾ ಕೋಡೋತ್ತ್ ಡಾ. ಅಂಬೇಡ್ಕರ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಂಗವಾಗಿ ವಿವಿಧ ಕಲಾ ಕಾರ್ಯಕ್ರಮಗಳೂ ನಡೆದವು.
2024-25ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಪ್ರೀ ಪ್ರೈಮರಿ ವಿಭಾಗದಲ್ಲಿ 1,34,763, ಪ್ರೈಮರಿ ವಿಭಾಗದಲ್ಲಿ 11,59,652, ಅಪ್ಪರ್ ಪ್ರೈಮರಿ ವಿಭಾಗದಲ್ಲಿ 10,79,019, ಹೈಸ್ಕೂಲ್ ವಿಭಾಗದಲ್ಲಿ 12,09,882, ಪ್ಲಸ್ ಟುನಲ್ಲಿ 3,83,515, ವಿ.ಎಚ್ಎಸ್ಇ (ದ್ವಿತೀಯವರ್ಷ)ದಲ್ಲಿ 28,113 ಮಂದಿ ಸೇರಿದಂತೆ ಒಟ್ಟಾರೆಯಾಗಿ 39,94,944 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸರಕಾರಿ ಶಾಲೆಗಳ 11,19,380, ಅನುದಾನಿತ ಶಾಲೆಗಳಲ್ಲಿ 20,30,091 ಮತ್ತು ಅನಾನುದಾನಿತ ಶಾಲೆಗಳ 2,99,082 ಮಂದಿ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page