ವಲಸೆ ಕಾರ್ಮಿಕನ ಕೊಲೆ:  ಬಂಧಿತ ಆರೋಪಿ ಕೊಲೆಗೀಡಾದ ವ್ಯಕ್ತಿಯ ಬಾವ, ನ್ಯಾಯಾಂಗ ಬಂಧನ

ಕಾಸರಗೋಡು: ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ಕಳೆದ ಭಾನುವಾರ ರಾತ್ರಿ ವಲಸೆ ಕಾರ್ಮಿಕ ಪಶ್ಚಿಮ ಬಂಗಾಳ ನಿವಾಸಿ ಸುಶಾಂತ್ ರಾಯ್ (28)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಪಶ್ಚಿಮ ಬಂಗಾಳ ಜೈಪಾಲ್‌ಗುರಿ ನಿವಾಸಿ ಬೋಲ್‌ಬೆನ್‌ರಾಯ್ ಕೊಕೊವಪರ ಎಂಬವರ ಪುತ್ರ ಸಂಜಿತ್ ರಾಯ್ (35) ಕೊಲೆಗೀಡಾದ ವ್ಯಕ್ತಿಯ ಸಹೋದರಿಯ ಪತಿಯಾಗಿದ್ದಾನೆ. ಬಂಧಿತನನ್ನು ಪೊಲೀಸರು ಕಾಸರ ಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ದಲ್ಲಿ ಹಾಜರುಪಡಿ ಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಈ ವಲಸೆ ಕಾರ್ಮಿಕರಿಗೆ ಕೆಲಸ ಕೊಡಿಸಿದ್ದ ಗುತ್ತಿಗೆದಾರ ಟಿ. ದಾಮೋದರನ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆ ನಡೆದ ನಂತರ ಅದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಇತರ ವಲಸೆ ಕಾರ್ಮಿಕರು ಹಾಗೂ ಪಶ್ಚಿಮ ಬಂಗಾಳ ನಿವಾಸಿಗಳೂ ಆಗಿರುವ  ಪ್ರಕಾಶ್ ರಾಯ್, ಶ್ಯಾಮಲ್ ರಾಯ್, ಸುಭಾಷ್ ರಾಯ್ ಮತ್ತು ಪಬಿತ್ರ ಬರ್ಮನ್ ಹೆದರಿ ಅಲ್ಲಿಂದ ಪರಾರಿಯಾಗಿದ್ದರು. ನಂತರ ಅವರನ್ನು ಪಾಲಕ್ಕಾಡ್ ಒಟ್ಟಪಾಲದಿಂದ ಕಾಸರಗೋಡು ಎಸ್‌ಐ ಅನ್ವರ್‌ರ ನೇತೃತ್ವದ ತಂಡ ಅವರನ್ನು ಅಲ್ಲಿಂದ ವಶಕ್ಕೆ ತೆಗೆದುಕೊಂಡು ಕಾಸರಗೋಡು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸುಶಾಂತ್ ರಾಯ್‌ಯನ್ನು ಕೊಲೆಗೈದಿದ್ದು ಸಂಜಿತ್ ರಾಯ್ ಆಗಿರುವುದಾಗಿ ಅವರು  ಪೊಲೀಸರಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಆರೋಪಿ ಸಂಜಿತ್ ರಾಯ್‌ಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೈಯ್ಯಲ್ಪಟ್ಟ ಸುಶಾಂತ್ ರಾಯ್ ಓರ್ವ ನಿತ್ಯ ಕುಡುಕನಾಗಿದ್ದನು. ಕೊಲೆ ನಡೆದ ದಿನದಂದು ರಾತ್ರಿ ಆತ ಮದ್ಯದಮಲಿನಲ್ಲಿ ಬೊಬ್ಬೆಹಾಕಿ ದಾಂಧಲೆ ಸೃಷ್ಟಿಸಿ ಆರೋಪಿ ಸಂಜಿತ್ ರಾಯ್‌ಯ ಮೇಲೂ ಹಲ್ಲೆ ನಡೆಸಿದ್ದನು. ಆಗ ಸಂಜಿತ್ ರಾಯ್ ಮರದ ಹಲಗೆಯ ತುಂಡಿನಿಂದ ಸುಶಾಂತ್ ರಾಯ್‌ಯ ತಲೆಗೆ ಹೊಡೆದಿದ್ದನೆಂದೂ, ಆ ಹೊಡೆತದಿಂದ ಆತನ ಕುತ್ತಿಗೆ ಮತ್ತು ಗಡ್ಡದ ಭಾಗಕ್ಕೆ ಗಂಭೀರ ಗಾಯ ಉಂಟಾಗಿತ್ತು. ಗಾಯಗೊಂಡ ಆತ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಅಲ್ಲೇ ಕುಸಿದು ಬಿದ್ದಿದ್ದನು. ನಂತರ ಇತರ ಕಾರ್ಮಿಕರು ಸೇರಿ ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದರು. ವೈದ್ಯರು ತಪಾಸಣೆಗೊಳಪಡಿಸಿದಾಗ ಸುಶಾಂತ್ ರಾಯ್ ಸಾವನ್ನಪ್ಪಿರುವುದನ್ನು ವೈದ್ಯರು ಖಾತರಿಪಡಿಸಿದ್ದರೆಂದೂ ಇತರ ವಲಸೆ ಕಾರ್ಮಿಕರು ಪೊಲೀಸರಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರ ಹೊರತಾಗಿ ಅದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಇತರ ಕಾರ್ಮಿಕರಾದ ಮೈಲ್ ರಾಯ್, ಅಮಲ್ ಬರ್ಮನ್, ಕೇರಳೀಯರಾದ ಕೆ.ಪಿ. ಮುರಳೀಧರನ್ ಮತ್ತು ಎಂ. ರತೀಶ್ ಎಂಬವರನ್ನೂ ಪೊಲೀಸರು ಈ ಕೊಲೆ ಬಗ್ಗೆ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನೂ ದಾಖಲಿಸಿಕೊಂ ಡಿದ್ದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ಮೇಲ್ನೋಟದಲ್ಲಿ ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ನಳಿನಾಕ್ಷನ್‌ರ ನೇತೃತ್ವದಲ್ಲಿ ಎಸ್‌ಐ ಅನ್ವರ್‌ರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಳಿಕ ಬಂಧಿಸಿದೆ.

Leave a Reply

Your email address will not be published. Required fields are marked *

You cannot copy content of this page