ವಾಗ್ವಾದ ವೇಳೆ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು
ಕಾಸರಗೋಡು: ಪರಸ್ಪರ ವಾಗ್ವಾದದ ವೇಳೆ ದೂಡಿ ಹಾಕಿದ ಪರಿಣಾಮ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖ ಲಾಗಿದ್ದ ಪೈಂಟಿಂಗ್ ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.
ಕೇಳುಗುಡ್ಡೆ ಅಯ್ಯಪ್ಪನಗರ ನಿವಾಸಿ ಪೈಂಟಿಂಗ್ ಕಾರ್ಮಿಕ ಸದಾನಂದ (೬೪) ಸಾವನ್ನಪ್ಪಿದ ದುರ್ದೈವಿ. ಘಟನೆ ಬಗ್ಗೆ ಪೊಲೀಸರು ಹೀಗೆ ಹೇಳುತ್ತಿದ್ದಾರೆ:
ಸೆಪ್ಟಂಬರ್ ೨೬ರಂದು ಕೇಳುಗುಡ್ಡೆ ಅಯ್ಯಪ್ಪನಗರದಲ್ಲಿ ಸದಾನಂದ ಮತ್ತು ಪೈಂಟಿಂಗ್ ಕಾರ್ಮಿಕ ಅಯ್ಯಪ್ಪನಗರ ನಿವಾಸಿಯಾಗಿರುವ ಸೂರಜ್ (೩೭)ರ ಮಧ್ಯೆ ಪರಸ್ಪರ ವಾಗ್ವಾದ ಉಂಟಾಗಿತ್ತೆಂದೂ, ಆಗ ಸೂರಜ್ ಸದಾನಂದರನ್ನು ದೂಡಿಹಾಕಿದ್ದನು. ಆಗ ನೆಲಕ್ಕೆ ಬಿದ್ದ ಸದಾನಂದರ ತಲೆಗೆ ಗಂಭೀರ ಏಟು ಬಿದ್ದಿತ್ತು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಬಳಿಕ ಮನೆಗೆ ಕರೆತರಲಾಯಿತು. ಆ ಬಳಿಕ ಅವರಿಗೆ ವಾಂತಿ ಅನುಭವವುಂಟಾಗಿತ್ತು. ನಂತರ ಅವರನ್ನು ಮತ್ತೆ ನಗರದ ಅದೇ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಸದಾನಂದರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಸಾವನ್ನಪ್ಪಿದರೆಂದು ಪೊಲೀಸರು ತಿಳಿಸಿದ್ದಾರೆ.
ಸದಾನಂದರನ್ನು ಹಲ್ಲೆಗೊಳಿಸಿ ದೂಡಿಹಾಕಿದ ಆರೋಪದಂತೆ ಕಾಸರಗೋಡು ಪೊಲೀಸರು ಆರೋಪಿ ಸೂರಜ್‌ನ ವಿರುದ್ಧ ಮೊದಲು ಐಪಿಸಿ ಸೆಕ್ಷನ್ ೩೨೪ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಚಿಕಿತ್ಸೆಯಲ್ಲಿದ್ದ ಸದಾನಂದರು ಬಳಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೊಲೀಸರು ಸೆಕ್ಷನ್ ೩೨೪ನ್ನು ಬದಲಿಸಿ ಇದೀಗ ಐಪಿಸಿ ಸೆಕ್ಷನ್ ೩೦೪ ರಂತೆ ಮನಪೂರ್ವಕವಲ್ಲದ ನರಹತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಆರೋಪಿ ಸೂರಜ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸದಾನಂದರ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.
ಮೃತರು ಮಕ್ಕಳಾದ ಆಶಾಲತ, ಜಿತೇಶ್, ವಿವೇಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸದಾನಂದರ ಪತ್ನಿ ಪಾರ್ವತಿ ಮತ್ತು ಸಹೋದರ ಶಿವಾನಂದ ಈ ಹಿಂದೆ ನಿಧನಹೊಂದಿದ್ದಾರೆ.