ವಾಣೀನಗರ ಪರಿಸರದಲ್ಲಿ ಚಿರತೆ ಭೀತಿ: ಶಾಲೆಯಲ್ಲಿ ಹಾಜರಿ ಕುಸಿತ
ಪೆರ್ಲ: ಕೊಳತ್ತೂರು ಬಳಿ ಬೋನಿನಲ್ಲಿ ಸಿಲುಕಿದ ಹುಲಿಯನ್ನು ಬಂಟಾಜೆ ಬಳಿ ಕಾಡಿಗೆ ಬಿಟ್ಟಿರುವುದಾಗಿ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭೀತಿ ಸೃಷ್ಟಿಯಾಗಿದೆ. ಇದರಿಂದ ವಾಣೀನಗರ ಸರಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವುಂಟಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳ ಹೆತ್ತವರು ನಿರಂತರ ಪಂಚಾಯತ್ ಜನಪ್ರತಿನಿಧಿಗಳನ್ನು, ಸಮಾಜಸೇವಕರನ್ನು ಸಂಪರ್ಕಿಸಿ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸದಸ್ಯರಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ, ಮಾಜಿ ಸದಸ್ಯ ರವಿ ವಾಣೀನಗರ ಸಹಿತ ಹಲವರು ನಿನ್ನೆ ಸೆಕ್ಷನ್ ಫೋರೆಸ್ಟ್ ಆಫೀಸರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಎಣ್ಮಕಜೆ, ಬೆಳ್ಳೂರು, ಪಾಣಾಜೆ ಪಂಚಾಯತ್ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಎರಡೂ ಮಂಡಲಗಳ ಶಾಸಕರನ್ನು ಪಾಲ್ಗೊಳ್ಳಿಸಿ ಸ್ಥಳೀಯರ ಆತಂಕ ದೂರೀಕರಿಸುವ ಕೆಲಸ ಮಾಡಬೇಕೆಂದು ಸೋಮಶೇಖರ ಜೆ.ಎಸ್. ಒತ್ತಾಯಿಸಿದ್ದಾರೆ. ಚಿರತೆಯನ್ನು ಬಿಟ್ಟ ಸ್ಥಳ ಹಾಗೂ ಪರಿಸರದಲ್ಲಿ ಎಚ್ಚರಿಕೆ ಬೋರ್ಡ್‌ಗಳನ್ನು ಸ್ಥಾಪಿಸಬೇಕು, ಚಿರತೆಯನ್ನು ಹಿಡಿಯಲು ಬೋನ್ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಡಲಾಯಿತು.