ವಾರ್ಡ್ ವಿಭಜನೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತಲಾ ಒಂದು ವಾರ್ಡ್‌ನಂತೆ ಹೆಚ್ಚಳ; ಮುಂದಿನ ಚುನಾವಣೆಗೆ ಅನ್ವಯ

ತಿರುವನಂತಪುರ: ಸ್ಥಳೀಯಾ ಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ವಿಧೇಯಕಕ್ಕೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಹಿ ಹಾಕಿದ್ದಾರೆ. ಇದರಂತೆ ರಾಜ್ಯದ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ  ಶೀಘ್ರ ತಲಾ ಒಂದರಂತೆ  ವಾರ್ಡ್‌ಗಳ ಸಂಖ್ಯೆಯಲ್ಲಿ  ಹೆಚ್ಚಳ ಉಂಟಾಗಲಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ  ರಾಜ್ಯದ ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು ಆ ವೇಳೆ ಈ ತಿದ್ದುಪಡಿ ಕಾನೂನು ಅನ್ವಯಗೊಳ್ಳಲಿದೆ.

ರಾಜಕೀಯ ಉದ್ದೇಶದಿಂದ ವಾರ್ಡ್ ವಿಭಜನೆ ಮಸೂದೆಗೆ ಅಂಗೀಕಾರ ನೀಡಲಾಗಿದೆಯೆಂದು ವಿಪಕ್ಷಗಳು ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದಿರುವ ಹಿನ್ನೆಲೆಯಲ್ಲಿ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ  ವಾರ್ಡ್ ವಿಭಜನೆ  ಪೂರ್ವ ಪ್ರಕ್ರಿಯೆಗಳಿಗೆ ಈಗಾಗಲೇ ಸರಕಾರ ಚಾಲನೆ ನೀಡಿದೆ. ಇದರಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ತಲಾ ಒಂದರಂತೆ ರಾಜ್ಯದಲ್ಲಿ ಒಟ್ಟಾರೆ ಯಾಗಿ ವಾರ್ಡ್‌ಗಳ ಸಂಖ್ಯೆಯಲ್ಲಿ 1200ರಷ್ಟು ಹೆಚ್ಚಳ ಉಂಟಾಗಲಿದೆ.

ಗ್ರಾಮ ಪಂಚಾಯತ್‌ಗಳಲ್ಲಿ ತಲಾ ಒಂದು ಸಾವಿರ ಮಂದಿಗೆ ತಲಾ ಒಂದು ವಾರ್ಡ್‌ಗಳು ಬೇಕು ಎಂಬುವುದು ಲೆಕ್ಕಾಚಾರ. ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿರುವ ಹಿನ್ನಲೆಯಲ್ಲಿ ಅದನ್ನು ಪರಿಗಣಿಸಿ ಈ ವಾರ್ಡ್ ವಿಭಜನೆ ವಿಧೇಯಕಕ್ಕೆ ರೂಪು ನೀಡಲಾಗಿದೆ. ಇದರಂತೆ ಗ್ರಾಮ ಪಂಚಾಯತ್‌ಗಳ ವಾರ್ಡ್ ಪುನರ್ ನಿರ್ಣಯ ಪ್ರಕ್ರಿಯೆಗಳು ಒಂದೆರಡು ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ. ವಾರ್ಡ್‌ಗಳ ಸಂಖ್ಯೆಯಲ್ಲಿ 1200ರಷ್ಟು ಹೆಚ್ಚಳ ಉಂಟಾಗಲಿರುವ ಹಿನ್ನೆಲೆಯಲ್ಲಿ ಹೊಸ ಸದಸ್ಯರಿಗೆ ಗೌರವಧನ ಇತ್ಯಾದಿ ವತಿಯಿಂದ 5ವರ್ಷಗಳಿಗೆ  67 ಕೋಟಿ ರೂ.ಗಳ ಹೆಚ್ಚುವರಿ   ಆರ್ಥಿಕ ಹೊರೆ ಸರಕಾರಕ್ಕೆ ಉಂಟಾಗಲಿದೆ.

ತಮಗೆ ಅನುಕೂಲಕರವಾಗಿ ವಾರ್ಡ್ ವಿಭಜನೆ ನಡೆಸಲು ಆಡಳಿತ ಪಕ್ಷ ಮುಂದಾಗಿದ್ದು, ಹಾಗೆ ನಡೆದಲ್ಲಿ ಅದನ್ನು ಎದುರಿಸಲು ವಿಪಕ್ಷಗಳು ಅಗತ್ಯದ ಸಿದ್ಧತೆಯಲ್ಲಿ ಈಗಾಗಲೇ ತೊಡಗಿವೆ.

Leave a Reply

Your email address will not be published. Required fields are marked *

You cannot copy content of this page