ವಾಹನ ಅಪಘಾತದಲ್ಲಿ ಸಂಬಂಧಿಕರಾದ ಇಬ್ಬರು ಮೃತಪಟ್ಟ ಘಟನೆ: ನಾಡಿನಲ್ಲಿ ಶೋಕಸಾಗರ
ಕಾಸರಗೋಡು: ಕುಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಬೆಳಿಗ್ಗೆ ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ಸಂಬಂಧಿಕರಾದ ಇಬ್ಬರು ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಚಟ್ಟಂಚಾಲ್ ತೈರ ಮನ್ಯಂ ತಾಳತ್ತ್ ವೀಟಿಲ್ ಎಂ. ನಾರಾಯಣನ್ ನಾಯರ್-ಮಣಿ ದಂಪತಿಯ ಪುತ್ರ ಎಂ. ಗೋಪಾಲಕೃಷ್ಣನ್ ( ೫೫) ಹಾಗೂ ಇವರ ಸಹೋದರಿ ರುಕ್ಮಿಣಿಯ ಪತಿ ಪರವನಡ್ಕ ತಲಕ್ಲಾಯಿ ನಿವಾಸಿ ಸಿಪಿಸಿಆರ್ಐಯ ನಿವೃತ್ತ ಉದ್ಯೋಗಿಯಾದ ಪುದುಚ್ಚೇರಿ ನಾರಾಯಣನ್ ನಾಯರ್ (೬೮) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುಣಿಯ ನಿವಾಸಿ ಹಂಸ ಹಾಗೂ ಕಾರಿನಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗೋಪಾಲಕೃಷ್ಣನ್ ಹಾಗೂ ನಾರಾಯಣನ್ ನಾಯರ್ ಪ್ರಯಾಣಿಸುತ್ತಿದ್ದ ಸ್ಕೂಟರ್ಗೆ ಢಿಕ್ಕಿ ಹೊಡೆದ ಕಾರು ಪಾದಚಾರಿಯಾದ ಹಂಸ ಎಂಬವರಿಗೆ ಬಡಿದು ಮೋರಿ ಸಂಕ ನಿರ್ಮಾಣಕ್ಕಾಗಿ ತೋಡಿದ ಹೊಂಡಕ್ಕೆ ಬಿದ್ದಿದೆ. ಮೃತ ನಾರಾಯಣನ್ ನಾಯರ್ ಪತ್ನಿ ರುಕ್ಮಿಣಿ, ಮಕ್ಕಳಾದ ಅರುಣ್, ಅಖಿಲ, ಸಹೋದರ-ಸಹೋದರಿ ಯರಾದ ಕುಮಾರನ್, ಕೃಷ್ಣನ್, ಕಾರ್ತ್ಯಾ ಯಿನಿ, ಮೀನಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅದೇ ರೀತಿ ಮೃತ ಎಂ. ಗೋಪಾಲಕೃಷ್ಣನ್, ಪತ್ನಿ ಲಕ್ಷ್ಮಿ, ಮಕ್ಕಳಾದ ಡಾ. ಅಮೃತ, ಧನ್ಯಾ (ಎಲ್ಎಲ್ಬಿ ವಿದ್ಯಾರ್ಥಿನಿ), ಸಹೋದರ-ಸಹೋದರಿಯರಾದ ಹರೀಂದ್ರನ್, ರುಕ್ಮಿಣಿ, ರಾಧ, ಅಂಬುಜಾಕ್ಷಿ, ತಂಗಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.