ವಿದೇಶದಲ್ಲಿ ಕೆಲಸ ಭರವಸೆ: 2.5 ಲಕ್ಷ ರೂ. ಅಪಹರಿಸಿದ ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷನ ವಿರುದ್ಧ ದೂರು
ಕಾಸರಗೋಡು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷ ಸಹಿತ ಇಬ್ಬರು ತನ್ನ 2.5 ಲಕ್ಷ ರೂ. ಅಪಹರಿಸಿರುವುದಾಗಿ ಗೃಹಿಣಿ ದೂರು ನೀಡಿದ್ದಾರೆ. ಕಾಸರಗೋಡು ಪಿಲಿಕುಂಜೆ ನಿವಾಸಿ, ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷನಾಗಿರುವ ದಿಲೀಪ್ ದಿನೇಶ್, ದಿನೇಶ್ ಕುಮಾರ್ ಎಂಬಿವರ ವಿರುದ್ಧ ನಂಬಿಕೆ ದ್ರೋಹಕ್ಕೆ ಕಾಸರಗೋಡು ನಗರ ಠಾಣೆಗೆ ದೂರು ನೀಡಲಾಗಿದೆ. ಪುತ್ರ ಯುರೋಪ್ಯನ್ ದೇಶಗಳಿಗೆ ಕೆಲಸಕ್ಕೆ ತೆರಳಲು ವೀಸಾ ಸರಿಮಾಡಿ ನೀಡುವುದಾಗಿ ಭರವಸೆ ನೀಡಿ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಆರು ತಿಂಗಳೊಳಗೆ ವೀಸಾ ಸರಿಪಡಿಸಿ ನೀಡುವುದಾಗಿ ನಂಬಿಸಿದ ಹಿನ್ನೆಲೆಯಲ್ಲಿ 2022 ಮೇ ತಿಂಗಳಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಖಾತೆ ಮೂಲಕ ನಾಗವೇಣಿ 1 ಲಕ್ಷ ದಿಲೀಪ್‌ರಿಗೆ ಕಳುಹಿಸಿದ್ದರು. ಒಂದೂವರೆ ಲಕ್ಷ ರೂ. ಗೂಗಲ್ ಪೇ ಮೂಲಕ ಹಲವು ಬಾರಿಯಾಗಿ ಪಾವತಿಸಿದ್ದಾರೆ. ಆದರೆ ವರ್ಷ ಎರಡು ಕಳೆದರೂ ವೀಸಾ ಲಭಿಸಿಲ್ಲ. ಅಲ್ಲದೆ ಹಣವೂ ಹಿಂತಿರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ನಾಗವೇಣಿ ಪೊಲೀಸರನ್ನು ಸಮೀಪಿಸಿದ್ದು, ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಇದೇ ವೇಳೆ ಗೃಹಿಣಿಗೆ ವಂಚನೆಗೈದು ಎರಡೂವರೆ ಲಕ್ಷ ರೂ. ಅಪಹರಿಸಿದ ದಿಲೀಪ್‌ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಬ್ಲೋಕ್ ಪ್ರಧಾನ ಕಾರ್ಯದರ್ಶಿ ಕೆ. ಉದ್ದೇಶ್ ರಾಜ್ಯ ಅಧ್ಯಕ್ಷ ರಾಹುಲ್ ಮಾಂಕೂಟರಿಗೆ ದೂರು ನೀಡಿದ್ದಾರೆ. ಆರ್ಥಿಕ ವಂಚನೆ ಎದುರಿಸುತ್ತಿರುವ ಆರೋಪಿ ಮಂಡಲ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿರುವುದು ಕಾಂಗ್ರೆಸ್‌ಗೆ ದೋಷ ತರಬಹುದೆಂದು, ದಿಲೀಪ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.