ವಿದ್ಯಾರ್ಥಿಗಳನ್ನು ಗುರಿಯಿರಿಸಿ ಮಾದಕವಸ್ತು ಮಾರಾಟ : 70 ಗ್ರಾಂ ಎಂಡಿಎಂಎ ವಶ: ಮಂಜೇಶ್ವರದ ಮೂವರು ಸೇರಿ ಐವರ ಸೆರೆ
ಮಂಜೇಶ್ವರ: ವಿದ್ಯಾರ್ಥಿಗಳನ್ನು ಗುರಿಯಿರಿಸಿ ಕಾರ್ಯಾಚರಿಸುವ ಮಾದಕವಸ್ತು ಜಾಲ ಮತ್ತೆ ತೀವ್ರಗೊಂಡಿದ್ದು, ಈ ಬಗ್ಗೆ ಮಾಹಿತಿ ಲಭಿಸಿದ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಜೇಶ್ವರ ನಿವಾಸಿಗಳಾದ ಮೂವರ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ. ಇವರ ಕೈಯಿಂದ 70 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.
ಮಂಜೇಶ್ವರ ಉದ್ಯಾವರದ ಹಸನ್ ಆಶೀರ್ (34) ವರ್ಕಾಡಿ ಪಾವೂರಿನ ಮೊಹಮ್ಮದ್ ನೌಶಾದ್ (22 ಮತ್ತು ಯೂಸಿನ್ (35) ಪಯ್ಯನ್ನೂರು ಪೆರಿಂಙದ ಎ.ಕೆ. ರಿಯಾಸ್ (31) ಮತ್ತು ಕರ್ನಾಟಕ ಶಿವಮೊಗ್ಗ ಟಿಪ್ಪು ನಗರದ ಅಬ್ದುಲ್ ಶಾಕೀರ್ (24) ಬಂಧಿತರಾದ ಆರೋಪಿಗಳಾಗಿದ್ದಾರೆ.
ಮಂಗಳೂರು ನಗರದ ವಿದ್ಯಾರ್ಥಿಗಳಿಗೆ ಎಂಡಿಎಂಎ ವಿತರಿಸುವ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ಲಭಿಸಿದ್ದು, ಅದರ ಜಾಡು ಹಿಡಿದು ಸಿಸಿಬಿ ಪೊಲೀಸರು ಕೋಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ನೆತ್ತಿಲಪದವಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಐದು ಮಂದಿಯನ್ನು ಬಂಧಿಸಿ ಅವರಿಂದ ಎಂಡಿಎಂಎ, ಮೊಬೈಲ್ ಫೋನ್‌ಗಳು, 1460 ರೂ. ನಗದು, ಡಿಜಿಟಲ್ ತಕ್ಕಡಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 4,25,500 ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಹಸನ್ ಆಶೀಕ್‌ನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಮಾದಕ ದ್ರವ್ಯ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಹೊರತಾಗಿ ಇನ್ನೋರ್ವ ಆರೋಪಿ ಯೂಸಿನ್ ಮಂಜೇಶ್ವರ ಮತ್ತು ಬೆಂಗಳೂರು ಹೆಬ್ಬಾರ್ ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡ ಮಾದಕ ದ್ರವ್ಯ ಪ್ರಕರಣದಲ್ಲೂ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ ಎಸಿಪಿ ಮನೋಜ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈ ಐವರು ಆರೋಪಿಗಳನ್ನು ಬಂಧಿಸಿದೆ.