ವಿದ್ಯಾರ್ಥಿ ಸಾಕಿದ ಆಡುಗಳನ್ನು ಕಚ್ಚಿ ಕೊಂದ ಬೀದಿ ನಾಯಿ: ಎಕೆಪಿಎಯಿಂದ ಸಹಾಯ ಹಸ್ತ
ಕಾಸರಗೋಡು: ಶಿಕ್ಷಣಕ್ಕೆ ಆರ್ಥಿಕ ಮೂಲ ಸಂಗ್ರಹಿಸಲು ಸಾಕಿ ಸಲಹಿದ ಆಡುಗಳನ್ನು ಬೀದಿ ನಾಯಿಗಳು ಕಚ್ಚಿ ಕೊಂದ ಹಿನ್ನೆಲೆಯಲ್ಲಿ ಆತಂಕಿತನಾದ ಅಹಮ್ಮದ್ ತನ್ವೀರ್ ಹಾಗೂ ಸಹೋದರನಿಗೆ ಎಕೆಪಿಎ ವತಿಯಿಂದ ಸಾಂತ್ವನ ನೀಡಲಾಯಿತು.
ಚೆರ್ಕಳದ ಅಹಮ್ಮದ್ ತನ್ವೀರ್ ಸಾಕಿ ಬೆಳೆಸಿದ ಆಡುಗಳನ್ನು ಇತ್ತೀಚೆಗೆ ಬೀದಿ ನಾಯಿಗಳು ಕಚ್ಚಿ ಕೊಂದಿದ್ದವು. ಈ ಬಗ್ಗೆ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಕಾಸರಗೋಡು ಈಸ್ಟ್ ಘಟಕ ಸಮಿತಿ ಸಹಾಯ ನೀಡಿದೆ. ವಿದ್ಯಾರ್ಥಿಯ ಮನೆಗೆ ತಲುಪಿ ಸಾಂತ್ವನ ನುಡಿದ ಎಕೆಪಿಎ ಪದಾಧಿಕಾರಿಗಳು ಕಲಿಕೆಗೆ ಅಗತ್ಯವಾದ ಪುಸ್ತಕಗಳು, ಬ್ಯಾಗ್, ವಾಟರ್ ಬಾಟಲ್, ಕೊಡೆ, ಕಂಪಾಸ್ ಎಂಬಿವು ಹಸ್ತಾಂ ತರಿಸಿದ್ದಾರೆ. ಸಂಘಟನೆಯ ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ಅಜಿತ್ ಕುಮಾರ್, ಮಣಿ, ವಾಮನ್ ಕುಮಾರ್, ದಿನೇಶ್, ಸನ್ನಿ ಜೇಕಬ್, ರಾಜೇಂದ್ರನ್ ವೇಳೆ ಉಪಸ್ಥಿತರಿದ್ದರು.