ವಿದ್ಯಾರ್ಥಿ ಹೊಳೆಯಲ್ಲಿ ಮುಳುಗಿ ಸಾವು
ಕಾಸರಗೋಡು: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ರಾಜಪುರಂಗೆ ಸಮೀಪದ ಬಳಾಂತೋಡು ಕೋಯುತ್ತಡ್ಕದ ರಾಜನ್ ಎಂಬವರ ಪುತ್ರ ರಾಜಪುರಂ ಸೈಂಟ್ ಪಯಸ್ ಟೆನ್ತ್ ಕಾಲೇಜಿನ ದ್ವಿತೀಯ ವರ್ಷ ಬಿ.ಬಿ.ಎ ವಿದ್ಯಾರ್ಥಿ ಎ.ಆರ್. ರಾಹುಲ್ (19) ಸಾವನ್ನಪ್ಪಿದ ದುರ್ದೈವಿ. ಈತ ನಿನ್ನೆ ತನ್ನ ಇಬ್ಬರು ಸ್ನೇಹಿತರ ಜೊತೆ ಬಳಾಂತೋಡು ಮಾಯತ್ತಿ ಭಗವತಿ ಕ್ಷೇತ್ರದ ಬಳಿಯ ಹೊಳೆಗೆ ಮೀನು ಹಿಡಿಯಲೆಂದು ಹೋಗಿದ್ದನು. ನಂತರ ಸ್ನಾನಕ್ಕೆಂದು ಹೊಳೆಗೆ ಇಳಿದಾಗ ಆತ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಆಗ ಅದನ್ನು ಕಂಡ ಜೊತೆಗಿದ್ದ ಸ್ನೇಹಿತರು ಜೋರಾಗಿ ಬೊಬ್ಬೆಹಾಕಿದಾಗ ನೆರೆಯವರು ಅಲ್ಲಿಗೆ ಓಡಿ ಬಂದು ರಾಹುಲ್‌ನನ್ನು ನೀರಿನ ಅಡಿಭಾಗದಿಂದ ಮೇಲಕ್ಕೆತ್ತಿ ತಕ್ಷಣ ಕೋಳಿಚ್ಚಾಲ್‌ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ನಂತರ ಅಲ್ಲಿಂದ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಮೃತ ರಾಹುಲ್ ತಂದೆಯ ಹೊರತಾಗಿ ತಾಯಿ ಶಿಜಿ, ಸಹೋದರ ಅಖಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.