ವಿದ್ಯುತ್ ತಂತಿ ಮೇಲೆ ಮಡಲು ಬಿದ್ದು ಪ್ರಯಾಣದ ಮಧ್ಯೆ ರೈಲಿನೊಳಗೆ ಸಿಲುಕಿಕೊಂಡ ಸಚಿವ
ಕಾಸರಗೋಡು: ವಿದ್ಯುತ್ ತಂತಿ ಮೇಲೆ ತೆಂಗಿನ ಮರದಿಂದ ಮಡಲು ಬಿದ್ದ ಕಾರಣ ರೈಲು ಸಂಚಾರ ಮುಂದುವರಿಸಲಾಗದೆ ಅಲ್ಲೇ ನಿಂತು, ಇದರಿಂದ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಾಜ್ಯ ಉನ್ನತ ಶಿಕ್ಷಣ ಖಾತೆ ಸತಿವೆ ಆರ್. ಬಿಂದು ಅವರೂ ರೈಲಿನಲ್ಲೇ ಸಿಲುಕಿಕೊಂಡ ಘಟನೆ ಇಂದು ನಸುಕಿನ ಜಾವ ನಡೆದಿದೆ. ತಿರುವನಂತಪುರದಿಂದ ಮಂಗಳೂರಿಗೆ ಬರುತ್ತಿದ್ದ ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಕಾಸರಗೋಡಿನತ್ತ ಬರುತ್ತಿದ್ದಂತೆ ಅದು ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆಗೆ ಕೋಟಿಕುಳದ ಬಳಿ ತಲುಪಿದಾಗ ರೈಲು ಹಳಿ ಪಕ್ಕದಲ್ಲಿದ್ದ ತೆಂಗಿನ ಮರವೊಂದರ ಮಡಲು ರೈಲಿನ ವಿದ್ಯುತ್ ತಂತಿ ಮೇಲೆ ಬಿದ್ದು ಇದರಿಂದ ರೈಲಿಗೆ ಮುಂದಕ್ಕೆ ಸಾಗಲು ಸಾಧ್ಯವಾಗದೆ ಅದನ್ನು ಅಲ್ಲೇ ನಿಲ್ಲಿಸಬೇಕಾಗಿ ಬಂತು. ಇದೇ ರೈಲಿನಲ್ಲಿ ಸಚಿವೆ ಆರ್. ಬಿಂದು ಪ್ರಯಾಣಿಸುತ್ತಿದ್ದರು. ಕಾಸರಗೋಡಿನಲ್ಲಿ ಇಂದು ನಡೆಯಲಿರುವ ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲೆಂದು ಸಚಿವರು ತಿರುವನಂತಪುರರಿಂದ ರೈಲಿನಲ್ಲಿ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿದ್ದರು. ತಂತಿ ಮೇಲೆ ಮಡಲು ಬಿದ್ದು ರೈಲು ಮುಂದಕ್ಕೆ ಸಾಗಿದಾಗ ಇತರ ಪ್ರಯಾಣಿಕರಂತೆ ಸಚಿವರು ಕೂಡಾ ರೈಲಿನೊಳಗೆ ಸುಮಾರು ಒಂದು ತಾಸಿನ ತನಕ ಸಿಲುಕಿಕೊಂಡರು. ಕೊನೆಗೆ ಚೆರುವತ್ತೂರಿನಿಂದ ಟೆಕ್ನೀಶಿಯನ್‌ಗಳು ಆಗಮಿಸಿ ತಂತಿಯಿಂದ ಮಡಲನ್ನು ತೆಗೆದು ತಂತಿಗಳನ್ನು ಸರಿಪಡಿಸಿದ ಬಳಿಕ ರೈಲು ಅಲ್ಲಿಂದ ಕಾಸರಗೋಡಿನತ್ತ ಸೇವೆ ಮುಂದುವರಿಸಿತು.