ವಿದ್ಯುತ್ ದರ ಏರಿಕೆ: ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಆರಂಭ
ಕಾಸರಗೋಡು: ವಿದ್ಯುತ್ ದರ ಹೆಚ್ಚಿಸಬೇಕೆಂಬ ರಾಜ್ಯ ವಿದ್ಯುನ್ಮಂಡಳಿ ಮುಂದುವರಿಸಿರುವ ಬೇಡಿಕೆಯಂತೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ (ನಿಯಂತ್ರಣ) ಆಯೋಗ ಆ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಕ್ರಮ ಆರಂಭಿಸಿದೆ.
ಇದರಂತೆ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಟಿ.ಕೆ. ಜೋಸ್ ನೇತೃತ್ವದ ತಂಡ ಇಂದು ಬೆಳಿಗ್ಗೆ ತಿರುವನಂತಪುರದಲ್ಲಿ ಠಿಕಾಣಿ ಹೂಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸತೊಡಗಿದೆ. ನಂತರ ರಾಜ್ಯದ ವಿವಿಧೆಡೆಗಳಲ್ಲೂ ಆಯೋಗ ಠಿಕಾಣಿ ಹೂಡಿ ಈ ವಿಷಯದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದನ್ನು ಹಾಗೂ ವಿದ್ಯುನ್ಮಂಡಳಿಯ ಬೇಡಿಕೆಗಳನ್ನು ಪರಿಶೀಲಿಸಿ ಆಯೋಗ ವಿದ್ಯುತ್ ದರ ಏರಿಕೆ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಂಡು ಅದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ. ಅದರ ಆಧಾರದಲ್ಲಿ ಸರಕಾರ ವಿದ್ಯುತ್ ದರ ಏರಿಕೆ ಕ್ರಮ ಜ್ಯಾರಿಗೊಳಿಸಲಿದೆ.
ಕೊನೆಯ ಬಾರಿಗೆ ವಿದ್ಯುತ್ ದರ ಏರಿಕೆ (ಟಾರೀಫ್) ಅವಧಿ ಕಳೆದ ಜೂನ್ ತಿಂಗಳಲ್ಲೇ ಕೊನೆಗೊಂಡಿತ್ತು. ಅದರಿಂದ ಟಾರೀಫ್ ದರ ಮತ್ತೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ವಿದ್ಯುನ್ಮಂಡಳಿ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಇರಿಸಿದೆ. ಯೂನಿಟ್ ಒಂದರ ವಿದ್ಯುತ್ ದರವನ್ನು ತಲಾ ೩೦ ಪೈಸೆ ತನಕ ಹೆಚ್ಚಿಸಬೇಕೆಂದು ವಿದ್ಯುನ್ಮಂಡಳಿ ಆಗ್ರಹಪಟ್ಟಿದೆ. ನಂತರದ ವರ್ಷಗಳಲ್ಲೂ ಹೀಗೆ ದರ ಏರಿಕೆಯೊಂದಿಗೆ ಮುಂದಕ್ಕೆ ಸಾಗಬೇಕಾದ ಅನಿವಾರ್ಯತೆಯೂ ಇದೆಯೆಂದು ಮಂಡಳಿ ಹೇಳಿದೆ.