ವಿದ್ಯುತ್ ದರ ಶೀಘ್ರ ಏರಿಕೆ
ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರದಲ್ಲಿ ಶೀಘ್ರ ಏರಿಕೆಯುಂಟಾಗಲಿದೆ.
ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಉಂಟಾಗಿರುವ 1.6 ಲಕ್ಷ ಕೋಟಿ ರೂ. ನಷ್ಟವನ್ನು ಮುಂದಿನ ಎರಡೂವರೆ ವರ್ಷದೊಳಗೆ ಭರ್ತಿಗೊಳಿಸುವಂತೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗಕ್ಕೆ ಸುಪ್ರೀಂಕೋರ್ಟ್ ನಿನ್ನೆ ನಿರ್ದೇಶ ನೀಡಿದೆ. ಈ ನಷ್ಟದ ವತಿ ಯಿಂದ ರಾಜ್ಯ ವಿದ್ಯುನ್ಮಂಡಳಿ 6600 ಕೋಟಿ ರೂ.ವನ್ನು ವಿದ್ಯುತ್ ಉತ್ಪಾ ದನಾ ಸಂಸ್ಥೆಗಳಿಗೆ ನೀಡಬೇಕಾಗಿದೆ. ಈ ಮೊತ್ತವನ್ನು ವಸೂಲಿ ಮಾಡಲು ಮುಂದಿನ ಎರಡೂವರೆ ವರ್ಷದ ತನಕ ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ ತಲಾ 90 ಪೈಸೆಯಂತೆ ಏರಿಸಬೇಕಾಗಿ ಬರಲಿದೆ. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಶೀಘ್ರ ಜಾರಿಗೊಳಿಸಬೇಕಾಗಿ ಬರಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ದರವನ್ನು ಶೀಘ್ರ ಹೆಚ್ಚಿಸಲು ವಿದ್ಯುನ್ಮಂಡಳಿ ಕಡ್ಡಾಯಗೊಳಿಸಲ್ಪಟ್ಟಿದೆ. ಸುಪ್ರೀಂಕೋರ್ಟ್ನ ತೀರ್ಪಿನಂತೆ ಕೇರಳ ಮಾತ್ರವಲ್ಲ ಭಾರತ ಇತರ ರಾಜ್ಯಗಳೂ ವಿದ್ಯುತ್ ದರ ಹೆಚ್ಚಿಸಬೇಕಾಗಿ ಬರಲಿದೆ. ಹೀಗೆ ಒಂದೇ ಬಾರಿ ಯೂನಿಟ್ಗೆ ತಲಾ 90 ಪೈಸೆಯಂತೆ ವಿದ್ಯುತ್ ದರ ಹೆಚ್ಚಿಸಿದಲ್ಲಿ ಸಾಮಾನ್ಯ ವಿದ್ಯುತ್ ಬಳಕೆದಾರರಿಗೆ ಅದು ಭಾರೀ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಆದರೆ ಈ ವಿಷಯದಲ್ಲಿ ರಾಜ್ಯ ವಿದ್ಯುತ್ ಇಲಾಖೆ ಈತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವಿದ್ಯುತ್ ನಿಯಂತ್ರಣಾ ಆಯೋಗ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.