ವಿದ್ಯುತ್ ಸಬ್ಸಿಡಿ ರದ್ದು ಸಾಧ್ಯತೆ
ತಿರುವನಂತಪುರ: ರಾಜ್ಯದಲ್ಲಿ ತಿಂಗಳಿಗೆ 240 ಯೂನಿಟ್ಗಿಂತ ಕಡಿಮೆ ವಿದ್ಯುತ್ ಉಪಯೋಗಿಸುವ ಬಳಕೆದಾರರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಇದು ಜ್ಯಾರಿಗೊಂಡಲ್ಲಿ ರಾಜ್ಯದಲ್ಲಿ 240 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವ ಬಳಕೆದಾರರಿಗೆ ಪ್ರತೀ ಎರಡು ತಿಂಗಳ ವಿದ್ಯುತ್ ಬಿಲ್ನಲ್ಲಿ ನೀಡಲಾಗುವ ತಲಾ 148 ರೂ. ಸಬ್ಸಿಡಿ ಇಲ್ಲದಾಗಲಿದೆ. 240 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಉಪಯೋಗಿಸುವ 65 ಲಕ್ಷದಷ್ಟು ಕುಟುಂಬಗಳು ರಾಜ್ಯದಲ್ಲಿದ್ದು ಅವರ ಮೇಲೆ ಇದು ಪರಿಣಾಮ ಬೀರಲಿದೆ. ವಿದ್ಯುತ್ ಬಳಕೆದಾರರಿಂದ ವಸೂಲಿ ಮಾಡಲಾಗುವ ಇಲೆಕ್ಟ್ರಿಸಿಟಿ ಡ್ಯೂಟಿ ಮೊತ್ತದಿಂದ ಈ ಸಬ್ಸಿಡಿಯನ್ನು ವಿದ್ಯುತ್ ಮಂಡಳಿ ನೀಡುತ್ತಿದೆ. ಇಲೆಕ್ಟ್ರಿಸಿಟಿ ಡ್ಯೂಟಿಗೆ ಸಂಬAಧಿಸಿದ ಕೇಸೊಂದು ಈಗ ರಾಜ್ಯ ಹೈಕೋರ್ಟ್ನಲ್ಲಿದ್ದು, ಅದರ ತೀರ್ಪು ಹೊರಬಂದ ಬಳಿಕ ಈ ಡ್ಯೂಟಿ ಮೂಲಕ ಹಣವನ್ನು ಸರಕಾರಕ್ಕೆ ಪಾವತಿಸುವಸ್ಥಿತಿ ವಿದ್ಯುತ್ ಮಂಡಳಿಗೆ ಉಂಟಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ವಿದ್ಯುತ್ ಬಳಕೆದಾರರಿಗೆ ಈಗ ಲಭಿಸುವ ಸಬ್ಸಿಡಿ ಇಲ್ಲದಾಗಲಿದೆ. ಉಮ್ಮನ್ ಚಾಂಡಿ ನೇತೃತ್ವದ ಈ ಹಿಂದಿನ ಸರಕಾರ 2012ರಲ್ಲಿ ವಿದ್ಯುತ್ ದರ ಹೆಚ್ಚಿಸಿದ ವೇಳೆ ಅದು ಕಡಿಮೆ ಪ್ರಮಾಣ ದಲ್ಲಿ ವಿದ್ಯುತ್ ಉಪಯೋಗಿಸುವವರ ಮೇಲೆ ಪರಿಣಾಮ ಬೀರದಿರಲು ಸರಕಾರ ಈ ಸಬ್ಸಿಡಿ ಘೋಷಿಸಿತ್ತು. ಈ ಸಬ್ಸಿಡಿಗಾಗಿ ಪ್ರತಿ ವರ್ಷ 303 ಕೋಟಿ ರೂ. ನೀಡಬೇಕಾಗಿ ಬರುತ್ತಿದೆ.