ವಿಧಾನಸಭೆಯಲ್ಲಿ ‘ಕಾಫಿರ್’ ಶಬ್ದ ಪ್ರಯೋಗ : ಸಮರ್ಥಿಸಿದ ಸಚಿವ: ವಿಪಕ್ಷ ಸಭಾತ್ಯಾಗ
ತಿರುವನಂತಪುರ: ವಡಗರೆಯ ‘ಕಾಫಿರ್’ ಪೋಸ್ಟ್ ವಿವಾದದ ಕಾವು ಇಂದು ಮುಂಜಾನೆ ಆರಂಭಗೊಂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಲ್ಪಟ್ಟು ಅದು ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ಸದ್ದುಗದ್ದಲ ಸೃಷ್ಟಿಸಿ ಕೊನೆಗೆ ವಿಪಕ್ಷೀಯರು ಸಭಾತ್ಯಾಗ ನಡೆಸಿದರು. ಸಾಮಾಜಿಕ ಜಾಲತಾಣ ದಲ್ಲಿ ಸಿಪಿಎಂ ನೇತಾರ, ಮಾಜಿ ಶಾಸಕ ಕೆ.ಕೆ. ಲತಿಕಾ ಸಾಮಾಜಿಕ ಜಾಲತಾಣ ದಲ್ಲಿ ಕಾಫಿರ್ ಎಂಬ ಪದಪ್ರಯೋಗ ನಡೆಸಿದ್ದರು. ಯುಡಿಎಫ್ ಶಾಸಕ ಮ್ಯಾಥ್ಯೂ ಕುಳನಾಡನ್ ಅವರು ಈ ವಿಷಯವನ್ನು ಇಂದು ಬೆಳಿಗ್ಗೆ ಪ್ರಶ್ನೋತ್ತರದ ವೇಳೆ ವಿಧಾನ ಸಭೆಯಲ್ಲಿ ಎತ್ತಿದರು. ಆ ಬಗ್ಗೆ ಮುಖ್ಯಮಂತ್ರಿ ಪರವಾಗಿ ನೀಡಿದ ಹೇಳಿಕೆಯಲ್ಲಿ ಅದನ್ನು ಸಚಿವ ಎಂ.ಬಿ. ರಾಜೇಶ್ ನ್ಯಾಯೀಕರಿಸಿದರು. ಪೋಸ್ಟ್ ಬಗ್ಗೆ ಎರಡು ದೂರುಗಳು ಲಭಿಸಿವೆ. ಅದನ್ನು ಸರಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಫೇಸ್ ಬುಕ್‌ನೊಂದಿಗೂ ಸ್ಪಷ್ಟೀಕರಣ ಕೇಳಲಾಗಿದೆ. ಆ ಕುರಿತಾದ ಮಾಹಿತಿ ಗಳು ಲಭಿಸಿದ ಬಳಿಕವಷ್ಟೇ ತನಿಖೆ ಪೂರ್ತೀಕರಿಸಲು ಸಾಧ್ಯವೆಂದು ಸಚಿವರು ಹೇಳಿದರು. ಆದರೆ ಆ ಪೋಸ್ಟ್‌ನಲ್ಲಿ ಮಾಡಲಾದ ಕಾಫಿರ್ ಪದಪ್ರಯೋಗವನ್ನು ಸಚಿವರು ಇದೇ ವೇಳೆ ನ್ಯಾಯೀಕರಿಸಿದರು. ಅದನ್ನು ವಿಪಕ್ಷಗಳು ತೀವ್ರವಾಗಿ ಪ್ರತಿಭಟಿಸಿ ರಂಗಕ್ಕಿಳಿದು ವಿಧಾನಸಭಾ ಅಧ್ಯಕ್ಷರ ಪೀಠದ ಮುಂದೆ ಜಮಾಯಿಸಿ ಘೋಷಣೆ ಮೊಳಗಿಸಿದರು. ನಿಜವಾದ ಪ್ರಶ್ನೆಗಳಿಂದ ಸಚಿವರು ನುಣುಚಿಕೊಳ್ಳುತ್ತಿ ದ್ದಾರೆ. ಕಾಫಿರ್ ಪದ ಪ್ರಯೋಗ ನಡೆಸಿದ ಮಾಜಿ ಶಾಸಕರ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಂಡಿಲ್ಲವೆಂದು ವಿಪಕ್ಷ ನಾಯಕ ವಿ.ಡಿ. ಸತೀಶನ್ ಪ್ರಶ್ನಿಸಿದ್ದರು. ಬಳಿಕ ಅವರ ನೇತೃತ್ವದಲ್ಲಿ ವಿಪಕ್ಷೀಯರು ಸಭಾ ತ್ಯಾಗ ನಡೆಸಿದರು.