ವಿಳಿಂಞದಿಂದ ಕಾಸರಗೋಡು ತನಕ ಕಡಲಬ್ಬರ: ಕರಾವಳಿ ಪ್ರದೇಶಗಳಲ್ಲಿ ಜಾಗ್ರತಾ ನಿರ್ದೇಶ
ಕಾಸರಗೋಡು: ರಾಜ್ಯದಾದ್ಯಂತ ಭಾರೀ ಬೇಸಿಗೆ ಮಳೆ ಒಂದೆಡೆ ಸುರಿಯುತ್ತಿರುವಂತೆಯೇ ಇನ್ನೊಂದೆಡೆ ಸಮುದ್ರದಲ್ಲಿ ಕಡಲಬ್ಬರವೂ ಆರಂಭಗೊಂಡಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳ ಎಲ್ಲಾ ಕರಾವಳಿಗಳಲ್ಲೂ ಕೇಂದ್ರ ಹವಾಮಾನ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ.
ಕಡಲಬ್ಬರದಿಂದಾಗಿ ಕಡಲ್ಕೊರೆತ ಸಾಧ್ಯತೆಯೂ ಹೆಚ್ಚಾಗಿದೆ. ಆದ್ದರಿಂದ ಸಮುದ್ರ ಕಿನಾರೆ ಪ್ರದೇಶಗಳ ನಿವಾಸಿಗಳು ಅತೀ ಜಾಗ್ರತೆ ಪಾಲಿಸಬೇಕೆಂದೂ ಇಲಾಖೆ ಹೇಳಿದೆ. ಬೇಸಿಗೆ ಜಡಿಮಳೆ ರಾಜ್ಯದಲ್ಲಿ ಇನ್ನೂ ಮುಂದುವರಿಯುತ್ತಿದ್ದು, ಆದ್ದರಿಂದ ಹೆಚ್ಚಿನ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಭಾರೀ ನಾಶನಷ್ಟವೂ ಉಂಟಾಗಿದೆ. ಪ್ರಾಕೃತಿಕ ವಿಕೋಪಕ್ಕೆ ರಾಜ್ಯದಲ್ಲಿ ಈ ತನಕ ಏಳಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.