ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಕರ್ನಾಟಕ ಮದ್ಯ, ಹುಳಿರಸ, ಗಾಂಜಾ ವಶ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಕಾಸರಗೋಡಿನ ವಿವಿಧೆಡೆಗಳಲ್ಲಿ ನಡೆಸಿದ ಅಬಕಾರಿ ಕಾರ್ಯಾಚರಣೆಗಳಲ್ಲಾಗಿ ಕರ್ನಾಟಕ ನಿರ್ಮಿತ ಮದ್ಯ, ಹುಳಿರಸ (ವಾಶ್) ಮತ್ತು ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಕಾಸರಗೋಡು ಅಬಕಾರಿ ರೇಂಜ್‌ನ ಎಕ್ಸೈಸ್ ಇನ್‌ಸ್ಪೆಕ್ಟರ್ ಶಿಜು ಇ.ಟಿ ನೇತೃತ್ವದ ಅಬಕಾರಿ ತಂಡ ಚೆಂಗಳ ಇಂದಿರಾನಗರದಲ್ಲಿ ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹ್ತಿತಿಲೊಂದರಲ್ಲಿ ಬಚ್ಚಿಡಲಾಗಿದ್ದ ಕರ್ನಾಟಕ ನಿರ್ಮಿತ 360 ಟೆಟ್ರಾ ಪ್ಯೆಕೆಟ್ (64.8 ಲೀಟರ್) ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೆಂಗಳ ಮುಟ್ಟತ್ತೋಡಿ ಎಸ್‌ಪಿ ನಗರದ ಶಾಜಹಾನ್ (42) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ, ಸಿಇಒಗಳಾದ ಬಾಬು, ರಾಜೇಶ್, ಫಸೀಲಾ ಬಿ, ಚಾಲಕರಾದ ಸುಮೋದ್ ಕುಮಾರ್, ಟಿ.ಕ್ರಿಷ್ಟಿ ಎಂಬವರು ಒಳಗೊಂಡಿದ್ದರು. ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅಮಲ್ ರಾಜನ್ ಅವರು ಈ ಪ್ರಕರಣದ ಬಗ್ಗೆ ಮುಂದಿನ ತನಿಖೆ ಆರಂಭಿಸಿದ್ದಾರೆ.
ಬಂದಡ್ಕ ಗ್ರಾಮದ ನರಿಂಬಿಲಕಂಡದ ಪೊದೆಯಲ್ಲಿ ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ತುಂಬಿಸಿ ಬಚ್ಚಿಡಲಾಗಿದ್ದ ಕಳ್ಳಭಟ್ಟಿ ತಯಾರಿಸಲೆಂದು ಸಿದ್ಧಪಡಿಸಲಾಗಿದ್ದ 20 ಲೀಟರ್ ಹುಳಿರಸವನ್ನು ಬಂದಡ್ಕ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಶೇಖ್ ಅಬ್ದುಲ್ ಬಶೀರ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ ಜಯರಾಜನ್ ಟಿ, ಸಿಇಒಗಳಾದ ಮಹೇಶ್ ಕೆ, ಸುಜಿತ್ ಟಿ ವಿ ಮತ್ತು ಗಣೇಶ್ ಕೆ ಎಂಬವರು ಒಳಗೊಂಡಿದ್ದರು.
ಪಳ್ಳಿಕ್ಕೆರೆ ಬೇಕಲ ಕೋಟೆಕುನ್ನ್‌ನಲ್ಲಿ ಹೊಸದುರ್ಗ ಅಬಕಾರಿ ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ ತಂಬಿ ಎ ಜಿ ನೇತೃತ್ವದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 30 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಳ್ಳಿಕ್ಕೆರೆ ಮಠತ್ತಿಲ್ ಹೌಸ್‌ನ ಸಲೀಂ ಬೇಕಲ್ (54) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಜಿತೇಂದ್ರನ್, ಸಂತೋಷ್ ಕುಮಾರ್, ಎ.ಪ್ರಶಾಂತ್ ಕುಮಾರ್, ಎ.ವಿ. ಪೀತಾಂಬರನ್, ಆಫೀಸರ್ ಪ್ರಮೋದ್ ಕುಮಾರ್ ಎಂಬವರು ಒಳಗೊಂಡಿದ್ದರು.