ವಿಷು ಆಚರಿಸಿ ಮನೆಗೆ ಮರಳಿದ ವ್ಯಕ್ತಿ ನಿಗೂಢ ರೀತಿಯಲ್ಲಿ ಸಾವು
ಮುಳ್ಳೇರಿಯ: ಕುಟುಂಬ ಸದಸ್ಯ ರೊಂದಿಗೆ ವಿಷು ಹಬ್ಬಾಚರಣೆಯಲ್ಲಿ ಪಾಲ್ಗೊಂಡು ಸ್ವಂತ ಮನೆಗೆ ಮರಳಿದ ವ್ಯಕ್ತಿ ದಾರಿಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೋವಿಕ್ಕಾನ ಬಳಿಯ ಎರಿಂಜೇರಿ ಚಕ್ಲಿಯ ಕಾಲನಿಯ ಪದ್ಮನಾಭ (೬೦) ಎಂಬವರು ಮೃತಪಟ್ಟ ವ್ಯಕ್ತಿ. ಪದ್ಮನಾಭ ಹಾಗೂ ಅವರ ಸಹೋದರನ ಮನೆ ಸಮೀಪದಲ್ಲಿದೆ. ನಿನ್ನೆ ರಾತ್ರಿ ಸಹೋದನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಪದ್ಮನಾಭ ವಿಷು ಆಚರಣೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ೧೦ ಗಂಟೆವರೆಗೆ ಕುಟುಂಬ ಸದಸ್ಯರೆಲ್ಲ ಸೇರಿ ಹಾಡು, ನೃತ್ಯದಲ್ಲಿ ತೊಡಗಿದ್ದರೆಂದು ಹೇಳಲಾಗು ತ್ತಿದೆ. ಬಳಿಕ ಅಲ್ಲಿಂದ ತನ್ನ ಮನೆಗೆ ಹೋಗುವುದಾಗಿ ತಿಳಿಸಿ ಹೋದ ಪದ್ಮ ನಾಭರನ್ನು ಬಳಿಕ ಮನೆಯವರು ಕಂಡಿ ರಲಿಲ್ಲ. ಇದೇ ವೇಳೆ ಪರಿಚಯಸ್ಥನಾದ ವ್ಯಕ್ತಿಯೊಬ್ಬನಿಗೆ ಪದ್ಮನಾಭ ಕರೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ದೃಢೀಕರಿಸಲಾಗಿಲ್ಲ.
ಪದ್ಮನಾಭಗಾಗಿ ಮನೆಯವರು ಹುಡುಕಾಡುತ್ತಿದ್ದಾಗ ಇಂದು ಬೆಳಿಗ್ಗೆ ೬.೩೦ರ ವೇಳೆ ದಾರಿ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ತಲೆ ಹಾಗೂ ಹಣೆಯಲ್ಲಿ ಗಾಯಗಳಿ ರುವುದಾಗಿ ಹೇಳಲಾಗುತ್ತಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಕಲ್ಲುಗಳಿದ್ದು, ಕಲ್ಲಿನ ಮೇಲೆ ರಕ್ತದ ಕಲೆಗಳು ಕಂಡು ಬಂದಿದೆ. ವಿಷಯ ತಿಳಿದು ತಲುಪಿದ ಆದೂರು ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ.
ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗೊಳ ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಪದ್ಮನಾಭ ದಾರಿ ಬದಿ ಬಿದ್ದು ಸಾವಿಗೀಡಾಗಲು ಕಾರಣವೇನೆಂಬ ಬಗ್ಗೆ ಪೊಲೀಸ್ ತನಿಖೆ ಆರಂಭಗೊಂಡಿದೆ. ಇದರ ಅಂಗವಾಗಿ ಬೆರಳಚ್ಚು ತಜ್ಞರು ಕೂಡಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.