ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಪದವಿ ವಿದ್ಯಾರ್ಥಿನಿ ಮೃತ್ಯು
ಉಪ್ಪಳ: ವಿಷ ಸೇವಿಸಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ಮೃತಪಟ್ಟರು. ಐಲ ಕುದುಪುಳು ನಿವಾಸಿ ಹಾಗೂ ಮಂಗಳೂರಿನ ಸರಕಾರಿ ಕಾಲೇಜಿನ ದ್ವಿತೀಯ ವರ್ಷ ಪದವಿ ವಿದ್ಯಾರ್ಥಿನಿ ಧನ್ಯಶ್ರೀ (19) ಮೃತಪಟ್ಟವರು. ನಯಾ ಬಜಾರ್‌ನಲ್ಲಿ ಆಟೋ ಚಾಲಕನಾಗಿರುವ ಸುರೇಶ್‌ರ ಪುತ್ರಿಯಾಗಿದ್ದಾರೆ.
ಕಳೆದ 12 ದಿನದ ಹಿಂದೆ ಹೊಟ್ಟೆ ನೋವೆಂದು ಉಪ್ಪಳದ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದರು. ಅಲ್ಪ ಶಮನಗೊಂಡರೂ ಮತ್ತೆ ತೀವ್ರ ಹೊಟ್ಟೆ ನೋವು ಕಂಡುಬಂದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರಲ್ಲಿ ಯುವತಿ ವಿಷ ಸೇವಿಸಿರುವುದಾಗಿ ಹೇಳಿದ್ದರು. ಬಳಿಕ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕರುಳು ಬದಲಾಯಿಸಿಯಾದರೂ ಜೀವ ಉಳಿಸಬಹುದೆಂಬ ವಿಚಾರದಲ್ಲಿ ಧನ್ಯಶ್ರೀಯನ್ನು ಕೊಚ್ಚಿಯ ಅಮೃತ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಈ ತಿಂಗಳ 18ರಂದು ಝಿರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಕರುಳು ಹಾಗೂ ಕಿಡ್ನಿ ಹಾನಿಯಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆದಿತ್ಯವಾರ ಅಲ್ಲಿಂದ ಮರಳಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಡ ಕುಟುಂಬದ ಯುವತಿಯ ಜೀವ ರಕ್ಷಣೆಗಾಗಿ ಬಿಜೆಪಿ ಮುಖಂಡ ಕೆ. ವಲ್ಸರಾಜ್‌ರ ನೇತೃತ್ವದಲ್ಲಿ ಸ್ಥಳೀಯರು ಸಹಾಯ ನೀಡಿದ್ದರು. ಆದರೆ ನಿನ್ನೆ ಆಕೆ ಕೊನೆಯುಸಿರೆಳೆದರು. ಬಳಿಕ ಮಹಜರು ನಡೆಸಿ ಮೃತದೇಹವನ್ನು ಮನೆಯವರಿಗೆ ಬಿಟ್ಟುಕೊಡಲಾಗಿದೆ. ಇಂದು ಬೆಳಿಗ್ಗೆ ಚೆರುಗೋಳಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆದಿದೆ.ಮೃತ ಯುವತಿ ತಂದೆ, ತಾಯಿ ಹರಿಣಾಕ್ಷಿ, ಸಹೋದರ ಧನುಷ್, ಸಹೋದರಿ ಧನ್ವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಆದರೆ ವಿಷ ಸೇವನೆಗೆ ಕಾರಣ ತಿಳಿದುಬಂದಿಲ್ಲ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ