ವ್ಯಾಪಕಗೊಳ್ಳುತ್ತಿರುವ ಕಡಲ್ಕೊರೆತ: ಮಣಿಮುಂಡ ಸಹಿತ ಕಡಲತೀರ : ಪ್ರದೇಶದ ಜನರ ಮನೆಗಳು ಸಮುದ್ರಪಾಲಾಗುವ ಭೀತಿ
ಉಪ್ಪಳ: ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳ ಕಡಲತೀರಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ರಸ್ತೆಗಳು ಹಾಗೂ ಮನೆಗಳು ಅಪಾಯದಂಚಿನಲ್ಲಿವೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಣಿಮುಂಡದಲ್ಲಿ ನಾಲ್ಕು ಮನೆಗಳು ಯಾವುದೇ ಕ್ಷಣ ಸಮುದ್ರಪಾಲಾಗುವ ಭೀತಿ ನೆಲೆಗೊಂಡಿದೆ. ಇಲ್ಲಿನ ಜಯರಾಮ, ಕೇಶವ, ಅಲಿಮ, ಅವ್ವಾಬಿ ಎಂಬವರ ಮನೆ ಅಪಾಯದಂಚಿನಲ್ಲಿದೆ. ಹಲವು ದಿನಗಳಿಂದ ಕಡಲ್ಕೊರೆತ ವ್ಯಾಪಕಗೊಂಡಿದ್ದು, ನೀರು ಮನೆಗೆ ಬಡಿದು ಅಂಗಳತನಕ ತಲುಪುತ್ತಿದೆ. ಮನೆ ಸುತ್ತಲೂ ಮರಳು ತುಂಬಿಕೊಂಡಿದ್ದು, ಇಲ್ಲಿ ವಾಸ ಮಾಡಲು ಅಸಾಧ್ಯವಾಗುತ್ತಿದೆ.
ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸಲು ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ನೀಡಿದರೂ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಿಂತಿರುಗುವುದಲ್ಲದೆ ಬೇರೇನೂ ಕ್ರಮ ಉಂಟಾಗುತ್ತಿಲ್ಲವೆನ್ನಲಾಗಿದೆ. ಹನುಮಾನ್‌ನಗರ ಹಾಗೂ ಪರಿಸರ ಮುಸೋಡಿ, ಮಂಜೇಶ್ವರ ಕಣ್ವತೀರ್ಥ ಮೊದಲಾದ ಕಡೆಗಳಲ್ಲೂ ಕಡಲ್ಕೊರೆತ ವ್ಯಾಪಕವಾಗುತ್ತಿದೆ. ತಡೆಗೋಡೆ ನಿರ್ಮಿಸಿ ಸಂಭವಿಸಬಹುದಾದ ನಾಶನಷ್ಟವನ್ನು ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.