ವ್ಯಾಪಕ ಮಳೆ: ಉಕ್ಕಿ ಹರಿಯುತ್ತಿರುವ ಹೊಳೆಗಳು; ಮಧೂರಿನಲ್ಲಿ ಐದು ಕುಟುಂಬಗಳ ಸ್ಥಳಾಂತರ: ಕೊಟ್ಟೋಡಿ ಶಾಲೆಗೆ ರಜೆ
ಕಾಸರಗೋಡು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ವ್ಯಾಪಕ ಹಾನಿ ಯುಂಟಾದ ಬಗ್ಗೆ ವರದಿಯಾಗಿದೆ. ವಿವಿಧೆಡೆ ಮಣ್ಣು ಕುಸಿತ ಉಂಟಾಗಿದೆ. ಹೊಳೆಗಳು ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ತಗ್ಗು ಪ್ರದೇಶಗಳು ನೀರಿನಿಂದಾವೃತಗೊಂಡಿ ರುವುದಾಗಿ ವರದಿಯಾಗಿದೆ.
ತೀವ್ರಗೊಂಡ ಮಳೆಯ ಹಿನ್ನೆಲೆಯಲ್ಲಿ ಕೊಟ್ಟೋಡಿ ಹೊಳೆ ಉಕ್ಕಿ ಹರಿಯುತ್ತಿದೆ. ಶಾಲೆ ಅಂಗಳ ದವರೆಗೆ ನೀರು ತಲುಪಿದ ಹಿನ್ನೆಲೆ ಯಲ್ಲಿ ಕೊಟ್ಟೋಡಿ ಸರಕಾರಿ ಶಾಲೆಗೆ ಜಿಲ್ಲಾಧಿಕಾರಿ ಇಂದು ರಜೆ ಘೋಷಿಸಿ ದ್ದಾರೆ. ಕೊಟ್ಟೋಡಿ ಮಸೀದಿಯ ಅಂಗಳದವರೆಗೂ ನೀರು ತುಂಬಿಕೊಂಡಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೂ ನೀರು ನುಗ್ಗಿದೆ. ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಹೆಚ್ಚಿನ ನೀರು ತುಂಬಿಕೊಂಡಿರುವುದಾಗಿ ಕ್ಷೇತ್ರ ಅಧಿಕಾರಿಗಳು ತಿಳಿಸಿದ್ದಾರೆ. ಮಧುವಾ ಹಿನಿ ಹೊಳೆ ಉಕ್ಕಿ ಹರಿದ ಹಿನ್ನೆಲೆ ಯಲ್ಲಿ ಮಧೂರು ಪಂಚಾಯತ್‌ನ ಪಟ್ಲ, ಮೊಗರುಬೂಡು ಪ್ರದೇಶಗ ಳಿಂದ ಐದು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಂಬಂಧಿಕರ ಮನೆಗೆ ಇದೀಗ ಇವರನ್ನು ಸ್ಥಳಾಂತರಿಸಿರುವುದಾಗಿ ತಿಳಿಸಲಾಗಿದೆ. ವಿಷಯ ತಿಳಿದು ಕಾಸರಗೋಡು ಅಗ್ನಿಶಾಮಕದಳ, ವಿದ್ಯಾನಗರ ಪೊಲೀಸರು, ವಿಪತ್ತು ನಿರ್ವಹಣಾ ಪಡೆ ಮತ್ತು ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ನೇತೃತ್ವ ನೀಡಿದರು. ಚಂದ್ರಗಿರಿ, ತೇಜಸ್ವಿನಿ, ಕಾರ್ಯಂಗಾಡು, ಚೈತ್ರವಾಹಿನಿ, ವಾವಡ್ಕ ಹೊಳೆಗಳಲ್ಲೂ ನೀರು ಉಕ್ಕಿ ಹರಿಯುತ್ತಿದೆ. ಮಳೆಗೆ ಮಲ್ಲದಲ್ಲಿ ಕಾಲುದಾರಿ ಕುಸಿದುಬಿದ್ದು ಆ ಪರಿಸರದ ಕೊಳಚಪ್ಪು, ಚೋಕೆ ಮೂಲೆ ಮೊದಲಾದ ಪ್ರದೇಶಗಳು ನೀರಿನಿಂದಾವೃತಗೊಂಡಿವೆ.