ವ್ರತ ನಿಷ್ಠೆಯಲ್ಲಿ ಪ್ರತೀ ತಿಂಗಳು ಶಬರಿಮಲೆಗೆ ತಲುಪುತ್ತಿದ್ದ ವ್ಯಕ್ತಿ ಕಳವು ಪ್ರಕರಣದಲ್ಲಿ ಸೆರೆ
ಶಬರಿಮಲೆ: ಶಬರಿಮಲೆ ಸನ್ನಿಧಾನದ ಕಾಣಿಕೆ ಡಬ್ಬಿಯನ್ನು ಮುರಿದು ತೆಗೆದು ಹಣ ಕಳವುಗೈದ ಪ್ರಕರಣದಲ್ಲಿ ತಮಿಳುನಾಡು ನಿವಾಸಿಯನ್ನು ಪಂಪಾ ಪೊಲೀಸರು ಸೆರೆಹಿಡಿದಿದ್ದಾರೆ. ತಮಿಳುನಾಡು ತೆಂಗಾಶಿ ಜಿಲ್ಲೆಯ ಕೀಲಸುರಂಡ ಎಂಬ ಸ್ಥಳದಲ್ಲಿ ವಾಸಿಸುವ ಮುರುಗನ್ರ ಪುತ್ರ ಸುರೇಶ್ (32) ಸೆರೆಯಾದವ. ಶಬರಿಮಲೆ ದೇವಸ್ಥಾನದ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯ ಬೀಗ ಮುರಿದು ಹಣ ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಸಿಂಹ ಮಾಸದ ಪೂಜೆಗಳಿಗಾಗಿ ಶಬರಿಮಲೆಯ ಬಾಗಿಲು ತೆಗೆದಾಗ ಅಗೋಸ್ತ್ ೨೦ರಂದು ಸನ್ನಿಧಾನದ ಕಾಣಿಕೆ ಡಬ್ಬಿ ಮುರಿದು ಈತ ಹಣ ಕಳವುಗೈದಿದ್ದನು.
ಗರ್ಭಗುಡಿಯ ಬಾಗಿಲು ಮುಚ್ಚಿದ ಬಳಿಕ ಘಟನೆ ಗಮನಕ್ಕೆ ಬಂದಿದ್ದು, ದೇವಸ್ವಂ ಬೋರ್ಡ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಸನ್ನಿಧಾನ ಹಾಗೂ ಪಂಪಾದ ಹಲವಾರು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಕಳ್ಳನ ಪತ್ತೆಗೆ ಪ್ರತ್ಯೇಕ ತಂಡವನ್ನು ಪೊಲೀಸರು ರೂಪೀಕರಿಸಿ ತನಿಖೆ ತೀವ್ರಗೊಳಿಸಿದ್ದರು. ಈ ಬಾರಿ ಕನ್ಯಾ ತಿಂಗಳ ಪೂಜೆಗಾಗಿ ಕ್ಷೇತ್ರದ ಬಾಗಿಲು ತೆರೆದಾಗ ಇಲ್ಲಿನ ಕೆಲಸಕ್ಕಾಗಿ ಬಂದ ವ್ಯಕ್ತಿಗಳ ಬಗ್ಗೆ ರಹಸ್ಯವಾಗಿ ನಿಗಾ ಇರಿಸಲಾಗಿತ್ತು. ಇದರಿಂದ ಕಳ್ಳನ ಸುಳಿವು ಲಭಿಸಿದೆ. ಆದರೆ ಎಲ್ಲಾ ತಿಂಗಳು ಶಬರಿಮಲೆಗೆ ಬಂದಿದ್ದ ಆರೋಪಿ ಕಳವು ಪ್ರಕರಣದಲ್ಲಿ ಕೇಸು ದಾಖಲಿಸಿದ ಬಗ್ಗೆ ತಿಳಿದು ಈ ತಿಂಗಳು ಶಬರಿಮಲೆಗೆ ತಲುಪಿರಲಿಲ್ಲ. ಈತನಿಗಾಗಿ ಪೊಲೀಸರು ತನಿಖೆ ನಡೆಸಿದಾಗ ಈತ ಫೋನ್ ಉಪಯೋಗಿಸುತ್ತಿರಲಿಲ್ಲವೆಂದು ತಿಳಿದುಬಂತು. ಇದು ತನಿಖೆಗೆ ಸಮಸ್ಯೆ ಉಂಟುಮಾಡಿದೆ. ಬಳಿಕ ಲಭಿಸಿದ ಮಾಹಿತಿಗಳ ಆಧಾರದಲ್ಲಿ ಈತನನ್ನು ತನಿಖಾ ತಂಡ ಸೆರೆಹಿಡಿದಿದೆ.