ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿ ಮಹಿಳೆ ರೈಲುಗಾಡಿಯಿಂದ ಬಿದ್ದು ಮೃತ್ಯು
ಉಪ್ಪಳ: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿ ಮಹಿಳೆ ರೈಲುಗಾಡಿಯಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ನಿನ್ನೆ ರಾತ್ರಿ 9.30ರ ವೇಳೆ ಉಪ್ಪಳ ರೈಲು ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕಲ್ಲೋಳಿ ಎಂಬಲ್ಲಿನ ದಿ| ಗೋವಿಂದಪ್ಪ ಎಂಬವರ ಪುತ್ರಿ ಕಸ್ತೂರಿ ಖಾನಗೌಡ್ರ (58) ಎಂಬ ವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಗೋವಾದಿಂದ ಎರ್ನಾಕುಳಂಗೆ ತೆರಳುತ್ತಿದ್ದ ರೈಲುಗಾಡಿಯಲ್ಲಿ ಇವರು ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿ 9.30ರ ವೇಳೆ ರೈಲುಗಾಡಿ ಉಪ್ಪಳಕ್ಕೆ ತಲುಪುತ್ತಿದ್ದಂತೆ ಪ್ರಯಾಣಿಕೆಯೊಬ್ಬರು ರೈಲುಗಾಡಿಯಿಂದ ಹೊರಕ್ಕೆ ಎಸೆಯಲ್ಪಟ್ಟಿರುವುದನ್ನು ತಿಳಿದ ಇತರ ಪ್ರಯಾಣಿಕರು ರೈಲಿನ ಸರಪಳಿ ಎಳೆದಿದ್ದರು. ಇದರಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ರೈಲು ನಿಂತಿದೆ. ಪ್ರಯಾಣಿಕೆ ಬಿದ್ದರೆಂದು ಹೇಳಲಾದ ಸ್ಥಳದವರೆಗೆ ರೈಲು ಹಿಂದಕ್ಕೆ ಚಲಿಸಿ ನಿಲ್ಲಿಸಿದ್ದು, ಬಳಿಕ ಇತರ ಪ್ರಯಾಣಿಕರು ಹಾಗೂ ಸ್ಥಳೀಯರು ಸೇರಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅನಂತರ ರೈಲು ಸಂಚಾರ ಮುಂದುವರಿ ಸಿತು. ಇದೇ ವೇಳೆ ರೈಲಿನಿಂದ ಬಿದ್ದಿರುವುದು ಕಸ್ತೂರಿಖಾನಗೌಡ್ರ ಎಂದು ಖಚಿತಗೊಂಡ ಹಿನ್ನೆಲೆಯಲ್ಲಿ ಅವರ ಜೊತೆಗಿದ್ದ ನಾಲ್ಕು ಮಂದಿ ವ್ರತಧಾರಿಗಳು ಅಲ್ಲಿ ಇಳಿದಿದ್ದಾರೆ. ಬಳಿಕ ಸ್ಥಳೀಯರ ಸಹಾಯದೊಂದಿಗೆ ಹುಡುಕಾಡಿದಾಗ ರೈಲುಹಳಿ ಪರಿಸರದಲ್ಲಿ ಕಸ್ತೂರಿ ಖಾನಗೌಡ್ರು ಬಿದ್ದಿರುವುದು ಕಂಡುಬಂದಿದೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಕಸ್ತೂರಿ ಖಾನಗೌಡ್ರ ಸಹಿತ 12 ಮಂದಿ ಮಹಿಳೆಯರು ಹಾಗೂ 40 ಮಂದಿ ಪುರುಷ ವ್ರತಧಾರಿಗಳು ಶಬರಿಮಲೆ ಕ್ಷೇತ್ರ ದರ್ಶನಕ್ಕೆ ಹೊರಟಿದ್ದರು. ಇವರು ಘಟಪ್ರಭಾ ನಿಲ್ದಾಣದಿಂದ ರೈಲಿಗೆ ಹತ್ತಿದ್ದರು.ರೈಲಿನ ಟಾಯ್ಲೆಟ್‌ಗೆ ಹೋದಾಗ ಕಸ್ತೂರಿ ಖಾನಗೌಡ್ರ ಆಯತಪ್ಪಿ ಹೊರಗೆ ಎಸೆದಿರಬಹುದೆಂದು ಅಂದಾಜಿಸಲಾಗಿದೆ.