ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರ ಕಾತರ
ಶಬರಿಮಲೆ: ಇಂದು ಮಕರಸಂ ಕ್ರಾಂತಿ ಶುಭದಿನ. ಶ್ರೀ ಅಯ್ಯಪ್ಪ ಕ್ಷೇತ್ರವಾದ ಶಬರಿಮಲೆಯಲ್ಲಿ ಸಂಜೆ ಮಕರಜ್ಯೋತಿ ದರ್ಶನವಾಗಲಿದೆ. ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ೧.೫ ಲಕ್ಷಕ್ಕೂ ಹೆಚ್ಚು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕಿರುವ ಕ್ಷಣಗಣನೆ ಆರಂಭಗೊಂಡಿದೆ. ಮಕರಜ್ಯೋತಿ ಆಚರಣೆ ಮತ್ತು ಅದರ ದರ್ಶನಕ್ಕಾಗಿ ಶಬರಿಮಲೆ ದೇಗುಲದಲ್ಲಿ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಇಂದು ಸಂಜೆ ೬ ಗಂಟೆಯಿಂದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಮಕರಜ್ಯೋತಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ೬ ಗಂಟೆ ವೇಳೆಗೆ ಪೊನ್ನಂಬಲ ಮೇಡ್ ಬೆಟ್ಟದಲ್ಲಿ ಮಕರಜ್ಯೋತಿ ಕಾಣಲಿದೆ. ಮಕರಜ್ಯೋತಿ ಉತ್ಸವ ಈ ತಿಂಗಳ 19ರಂದು ಕೊನೆಗೊಳ್ಳಲಿದೆ.
ಶ್ರೀ ಅಯ್ಯಪ್ಪ ದೇವರಿಗೆ ತೊಡಿಸಲಿರುವ ತಿರುವಾಭರಣ (ಚಿನ್ನದ ಒಡವೆಗಳು) ಒಳಗೊಂಡ ಶೋಭಾಯಾತ್ರೆ ಪಂದಳಂ ಅರಮನೆಯಿಂದ ನಿನ್ನೆ ಆರಂಭಗೊಂಡಿದೆ. ಅದು ಇಂದು ಮಧ್ಯಾಹ್ನ ಸನ್ನಿಧಾನಕ್ಕೆ ತಲುಪಲಿದೆ. ಅದಕ್ಕೆ ಸನ್ನಿಧಾನದಲ್ಲಿ ಭಕ್ತಿ ನಿರ್ಭರವಾದ ಸ್ವಾಗತ ನೀಡಲಾಗುವುದು. ನಂತರ ಶ್ರೀ ಕ್ಷೇತ್ರ ತಂತ್ರಿವರ್ಯ ಕಂಠರರ್ ರಾಜೀವರ್ ಮತ್ತು ಮುಖ್ಯ ಅರ್ಚಕರಾದ ಅರುಣ್ ಕುಮಾರ್ ನೇತೃತ್ವದ ಅರ್ಚಕರ ತಂಡ ಅದನ್ನು ಸ್ವೀಕರಿಸಿ ಶ್ರೀ ಕ್ಷೇತ್ರ ಗರ್ಭಗುಡಿಗೆ ಸಾಗಿಸಲಿದೆ. ಈ ಚಿನ್ನದೊಡವೆಗಳನ್ನು ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸಿ ಅಲಂಕರಿಸಲಾಗು ವುದು. ನಂತರ ಮಕರ ಜ್ಯೋತಿ ಪೂಜೆ ಆರಂಭಗೊಳ್ಳಲಿದೆ.