ಶಬರಿಮಲೆ ದರ್ಶನಕ್ಕೆ ಅಕ್ಷಯ ಕೇಂದ್ರ ಮೂಲಕ ಬುಕ್ಕಿಂಗ್ ಸೌಕರ್ಯಕ್ಕೆ ಮುಂದಾದ ಸರಕಾರ

ಶಬರಿಮಲೆ: ಶಬರಿಮಲೆ ದರ್ಶನಕ್ಕಿರುವ ಸ್ಪೋಟ್ ಬುಕ್ಕಿಂಗ್ ಸೌಕರ್ಯವನ್ನು ಸರಕಾರ ರದ್ದುಪಡಿಸಿದ ತೀರ್ಮಾನದ ವಿರುದ್ಧ ವ್ಯಾಪಕ ಪ್ರತಿಭಟನೆ ಎದ್ದಿರುವಂತೆಯೇ ಅದರಿಂದ ಪೇಚಿಗೀಡಾದ ಸರಕಾರ ಅಕ್ಷಯ ಕೇಂದ್ರಗಳ ಮೂಲಕವೂ ಬುಕ್ಕಿಂಗ್ ಸೌಕರ್ಯ ಏರ್ಪಡಿಸಲು ಮುಂದಾಗಿದೆ.

ಶಬರಿಮಲೆ  ಮುಜರಾಯಿ ಮಂಡಳಿಯ ಮಹತ್ವದ ಅವಲೋಕನಾ ಸಭೆ ಇಂದು ನಡೆಯಲಿದ್ದು, ಅದರಲ್ಲಿ ಸರಕಾರ  ತನ್ನ ಈ ನಿಲುವನ್ನು ಮುಂದಿರಿಸಲಿದೆ. ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಕೊಳ್ಳುವ ತೀರ್ಮಾನ ಅಂತಿಮವಾಗಲಿದೆ.

ಸ್ಪೋಟ್ ಬುಕ್ಕಿಂಗ್ ಸೌಕರ್ಯ  ರದ್ದುಪಡಿಸಿರುವುದನ್ನು ಪ್ರತಿಭಟಿಸಿ ವಿವಿಧ ಹಿಂದೂ ಸಂಘಟನೆಗಳು  ಪಂದಳಂ ರಾಜ ಮನೆತನದವರು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳೂ ರಂಗಕ್ಕಿಳಿದಿವೆ. ಅದರ ಬೆನ್ನಲ್ಲೇ ಆಡಳಿತ ಪಕ್ಷದ ಪ್ರಧಾನ ಘಟಕ ಪಕ್ಷಗಳಾದ ಸಿಪಿಎಂ ಕೂಡಾ ಸ್ಪೋಟ್ ಬುಕ್ಕಿಂಗ್ ಸೌಕರ್ಯ ನಿಲುಗಡೆಗೊಳಿಸದಂತೆ ಸರಕಾರವನ್ನು ಕೇಳಿಕೊಂಡಿದೆ.  ಶಬರಿಮಲೆಗೆ ಯುವತಿಯರಿಗೆ ಪ್ರವೇಶ ಅವಕಾಶ ನೀಡಿ 2018ರಂದು ರಾಜ್ಯ ಸರಕಾರ ಕೈಗೊಂಡ ತೀರ್ಮಾನದ ವಿರುದ್ಧ ರಾಜ್ಯವ್ಯಾಪಕವಾಗಿ ಭಾರೀ ಪ್ರತಿಭಟನೆಗಳ ಸರಮಾಲೆಯೇ ಎದ್ದುಬಂದಿತ್ತು. ಅಂತಹ ಸ್ಥಿತಿ ಸ್ಪೋಟ್ ಬುಕ್ಕಿಂಗ್ ರದ್ದುಪಡಿಸಿದ ವಿಷಯದಲ್ಲೂ ಈಗ ಉಂಟಾಗಬಹುದೆಂದು ಗುಪ್ತಚರ ವಿಭಾಗಗಳು ರಾಜ್ಯ ಸರಕಾರಕ್ಕೆ  ಮುನ್ನೆಚ್ಚರಿಕೆ ನೀಡಿದೆ. ಇದು ಸರಕಾರವನ್ನು ತೀವ್ರ ಸಂದಿಗ್ಧಾವಸ್ಥೆಯಲ್ಲಿ ಸಿಲುಕುವಂತೆ ಮಾಡಿದೆ. ಮಾತ್ರವಲ್ಲ ಇದರ ಕಾವು ಚುನಾವಣೆಯಲ್ಲೂ  ಬೀರುವ ಸಾಧ್ಯತೆ ಇದೆ.  ಆದ್ದರಿಂದ ಸ್ಪೋಟ್ ಬುಕ್ಕಿಂಗ್‌ನ್ನು ರದ್ದುಪಡಿಸಿದ ತೀರ್ಮಾನವನ್ನು ಸರಕಾರ ಹಿಂದಕ್ಕೆ ಪಡೆಯುವ ಸಾಧ್ಯತೆಯೂ ಇದೆ.

ಶಬರಿಮಲೆ ದರ್ಶನಕ್ಕಾಗಿ ಬರುವ ಎಲ್ಲಾ ಭಕ್ತರಿಗೂ  ದೇವರ ದರ್ಶನಕ್ಕಿರುವ ಸೌಕರ್ಯ ಏರ್ಪಡಿಸಲಾಗುವುದು. ಮುಂಗಡ ಬುಕ್ಕಿಂಗ್ ನಡೆಸದವರನ್ನು ಹಿಂದಕ್ಕೆ ಕಳುಹಿಸುವುದಿಲ್ಲವೆಂದು ಮುಜರಾಯಿ ಖಾತೆ ಸಚಿವ ವಿ.ಎನ್. ವಾಸನ್ ಇನ್ನೊಂದೆಡೆ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page