ಶಸ್ತ್ರಚಿಕಿತ್ಸೆ ವೇಳೆ ಬಾಲಕನ ಹೃದಯದ ನರ ತುಂಡರಿಸಿದ ಆರೋಪ: ತನಿಖೆಗೆ ಮಾನವಹಕ್ಕು ಆಯೋಗ ನಿರ್ದೇಶ
ಕಾಸರಗೋಡು: ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಹರ್ನಿಯ ಶಸ್ತ್ರಚಿಕಿತ್ಸೆಗೊಳಗಾದ 10ರ ಹರೆಯದ ಬಾಲಕನ ಶಸ್ತ್ರಚಿಕಿತ್ಸೆ ವೇಳೆ ಹೃದಯಕ್ಕಿರುವ ನರ ಆಕಸ್ಮಾತ್ ಆಗಿ ತುಂಡರಿಸಲ್ಪಟ್ಟಿತೆಂಬ ಆರೋಪದ ಕುರಿತು ತನಿಖೆ ನಡೆಸುವಂತೆ ಮಾನವ ಹಕ್ಕು ಆಯೋಗ ನಿರ್ದೇಶಿಸಿದೆ. ಕಾಸರಗೋಡು ಜಿಲ್ಲಾ ಮೆಡಿಕಲ್ ಆಫೀಸರ್‌ರಿಗೆ ಕಮಿಶನ್ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ಈ ಬಗ್ಗೆ ನಿರ್ದೇಶಿಸಿದ್ದಾರೆ. 15 ದಿನಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗಿದೆ. ಕಾಸರಗೋಡಿನಲ್ಲಿ ನಡೆಯುವ ಮುಂದಿನ ಸಿಟ್ಟಿಂಗ್‌ನಲ್ಲಿ ಪ್ರಕರಣವನ್ನು ಪರಿಗಣಿಸಲಾಗುವುದು. ಘಟನೆಯ ಕುರಿತು ಡಿಎಂಒ ಡಾ| ಎ.ವಿ. ರಾಮ್‌ದಾಸ್ ತನಿಖೆ ಆರಂಭಿಸಿದ್ದಾರೆ.
ಪೇರಳಂ ಎಂಬಲ್ಲಿನ ಅಶೋಕನ್- ಕಾರ್ತ್ಯಾಯಿನಿ ದಂಪತಿಯ ಪುತ್ರನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಸೆ. 18ರಂದು ಶಸ್ತ್ರಕ್ರಿಯೆ ನಡೆಸಲಾ ಗಿತ್ತು. ಶಸ್ತ್ರಚಿಕಿತ್ಸೆ ವೇಳೆ ನರ ಕತ್ತರಿಸಲ್ಪಟ್ಟ ಹಿನ್ನೆಲೆಯಲ್ಲಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಲಾ ಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಲೋಪ ಸಂಭವಿಸಿದೆ ಎಂಬುದಾಗಿ ತಜ್ಞವೈದ್ಯರು ಪರಿಶೀಲಿ ಸುವುದಾಗಿ ಡಿಎಂಒ ತಿಳಿಸಿದ್ದಾರೆ.