ಶಾಂತಿಗುರಿಯಲ್ಲಿ ಬೀಗ ಹಾಕಿದ ಮನೆಯಿಂದ ಚಿನ್ನಾಭರಣ ಕಳವು: ಬೆರಳಚ್ಚು, ಶ್ವಾನದಳದಿಂದ ತನಿಖೆ
ಉಪ್ಪಳ: ಮನೆಗೆ ಬೀಗ ಜಡಿದು ಕುಟುಂಬ ಪ್ರವಾಸಕ್ಕೆ ತೆರಳಿದ ಸಮ ಯದಲ್ಲಿ ಮನೆಯಿಂದ ಚಿನ್ನಾಭರಣ ಸಹಿತ ವಿವಿಧ ಸಾಮಗ್ರಿಗಳು ಕಳವಿ ಗೀಡಾದ ಘಟನೆ ಬೇಕೂರು ಬಳಿ ನಡೆದಿದೆ. ಬೇಕೂರು ಶಾಂತಿಗುರಿ ನಿವಾಸಿ ಗಲ್ಫ್ ಉದ್ಯೋಗಿ ಸಮೀರ್ ಎಂಬವರ ಮನೆಯಿಂದ 7 ಪವನ್ ಚಿನ್ನಾಭರಣವನ್ನು ಕಳವುಗೈಯ್ಯಲಾಗಿದೆ. ಕಳೆದ ಶುಕ್ರವಾರ ಇವರ ಕುಟುಂಬ ಹಾಗೂ ಪರಿಸರದ ಸಂಬಂಧಿಕರು ಒಟ್ಟು ಸೇರಿ ಊಟಿ ಸಹಿತ ವಿವಿಧೆಡೆ ಪ್ರವಾಸಕ್ಕೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಮನೆಗೆ ತಲುಪಿದ್ದು, ಈವೇಳೆ ಕಳವು ಕೃತ್ಯ ತಿಳಿದುಬಂದಿದೆ. ಎದುರು ಬಾಗಿಲು ಮುರಿಯಲು ಯತ್ನಿಸಿದ್ದು, ಆದರೆ ಮುರಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಮೇಲಂತಸ್ತಿನ ಕಟ್ಟಡದ ಕಪಾಟಿನಲ್ಲಿರಿಸಿದ ಚಿನ್ನಾಭರಣ ದೋಚಿದ್ದಾರೆ. ಕಳ್ಳರು ಮನೆಯೊಳಗಿದ್ದ ಸುಮಾರು ಏಳು ಕಪಾಟಿನ ಬೀಗವನ್ನು ಮುರಿದು ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಸ್ಥಳಕ್ಕೆ ಕುಂಬಳೆ ಠಾಣೆಯ ಎಸ್ಐ ರಾಜೀವನ್, ಪ್ರಸಾದ್ ಮೇಲತ್ ತೆರಳಿ ತನಿಖ ನಡೆಸಿದ್ದಾರ. ಬೆರಳಚ್ಚು ತಜ್ಞೆ ಪ್ರಜಿತ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಶ್ವಾನದಳ ಮನೆಯಿಂದ ರಸ್ತೆ ತನಕ ತೆರಳಿದೆ. ಕಳ್ಳರು ಮನೆಯ ಅಲ್ಪ ದೂರದ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸಿದ ಬಳಿಕ ಕಳವು ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ. ಕುಂಬಳೆ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.