ಶಾಂತಿಗುರಿ-ಕುಬಣೂರು ವಿದ್ಯಾನಗರ ರಸ್ತೆ ಶೋಚನೀಯ: ದುರಸ್ತಿಗೆ ಆಗ್ರಹ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಾಂತಿಗುರಿಯಿಂದ ಕುಬಣೂರು ವಿದ್ಯಾನಗರ ತನಕ ಮೂರು ಕಿಲೋ ಮೀಟರ್ ಉದ್ದದ ರಸ್ತೆ ಶೋಚನೀಯಾವಸ್ಥೆಗೆ ತಲುಪಿ ಹಲವು ವರ್ಷಗಳು ಕಳೆದರೂ ದುರಸ್ತಿ ನಡೆಸದಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣವಾಗಿದೆ. ಅಲ್ಲಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರಸ್ತೆ ಮೂಲಕ ಪ್ರತಾಪನಗರ, ತಿಂಬರ, ಶಾಂತಿಗುರಿ ಸಹಿತ ವಿವಿಧ ಪ್ರದೇಶದ ಜನರು ತಮ್ಮ ಅಗತ್ಯಗಳಿಗೆ ಕುಬಣೂರು, ಪಂಜತ್ತೊಟ್ಟಿ, ಪಚ್ಚಂಬಳ ಮೊದಲಾದ ಕಡೆಗಳಿಗೆ ಸಂಚರಿಸುತ್ತಿದ್ದಾರೆ. ಅಲ್ಲದೆ ದಿನನಿತ್ಯ ಶಾಲಾ ಮಕ್ಕಳು,ಶಾಲಾ ವಾಹನಗಳು ಕೂಡಾ ಇದೇ ರಸ್ತೆಯಲ್ಲಿ ಸಂಚರಿಸುತ್ತಿದೆ. ಮಳೆಗಾಲದಲ್ಲಿ ನೀರು ಕಟ್ಟಿ ನಿಂತು ಹೊಂಡ ಗಮನಕ್ಕೆ ಬಾರದೇ ಅಪಘಾತ ಸಂಭವಿಸುವುದಕ್ಕೂ ಕಾರಣವಾಗುತ್ತಿದೆ. ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.