ಶಾಲೆಗಳಲ್ಲಿ ಆಟದ ಮೈದಾನ ಕಡ್ಡಾಯ-ಹೈಕೋರ್ಟ್
ಕೊಚ್ಚಿ: ರಾಜ್ಯದ ಶಾಲೆಗಳಲ್ಲಿ ಆಟದ ಮೈದಾನ ಕಡ್ಡಾಯವೆಂದು ಹೈಕೋರ್ಟ್ ಆದೇಶಿಸಿದೆ. ಕೇರಳ ಶಿಕ್ಷಣ ಕಾಯ್ದೆ ಪ್ರಕಾರ ಆಟದ ಮೈದಾನಗಳಿಲ್ಲದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ನ ಏಕಸದಸ್ಯ ಪೀಠ ನಿರ್ದೇಶ ನೀಡಿದೆ. ಮೈದಾನಗಳಿಲ್ಲದ ಶಾಲೆಗಳನ್ನು ಮುಚ್ಚುಗಡೆಗೊಳಿಸುವ ಸಹಿತ ಕ್ರಮಕೈಗೊಳ್ಳಲು ಜಸ್ಟೀಸ್ ಪಿ.ವಿ. ಕುಂಞಿಕೃಷ್ಣನ್ ಸರಕಾರಕ್ಕೆ ನಿರ್ದೇಶ ನೀಡಿದ್ದಾರೆ. ಶಾಲೆಗಳಲ್ಲಿ ಆಟದ ಮೈದಾನಗಳು ಯಾವ ವಿಸ್ತೀರ್ಣದಲ್ಲಿ ಇರಬೇಕು ಎಂಬ ಕುರಿತು ಸರಕಾರ ಮಾರ್ಗಸೂಚಿ ಹೊರಡಿಸಬೇಕು. ಆಟದ ಮೈದಾನಗಳಲ್ಲಿ ಏರ್ಪಡಿಸಬೇಕಾದ ಸೌಕರ್ಯಗಳ ಕುರಿತು ಸುತ್ತೋಲೆ ಯಲ್ಲಿ ಸ್ಪಷ್ಟಪಡಿಸಬೇಕಾಗಿದೆ. ನಾಲ್ಕು ತಿಂಗಳುಗಳೊಳಗೆ ಮಾರ್ಗಸೂಚಿ ಹೊರಡಿಸುವಂತೆಯೂ ಆದೇಶದಲ್ಲಿ ತಿಳಿಸ ಲಾಗಿದೆ. ಕೊಲ್ಲಂ ತೇವಯೂರ್ ಸರಕಾರಿ ವೆಲ್ಫೇರ್ ಎಲ್ಪಿ ಶಾಲೆಯ ಆಟದ ಮೈದಾನ ದಲ್ಲಿ ನೀರಿನ ಟ್ಯಾಂಕ್ ನಿರ್ಮಿಸು ವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.