ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಿರುಕುಳ ಯತ್ನ: ಆರೋಪಿ ಬಂಧನ
ಕಾಸರಗೋಡು: ಶಾಲೆಗೆ ತೆರಳುತ್ತಿದ್ದ 17ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ಮಾಹಿತಿಯಂತೆ ಮನೆಯವರು ಹಾಗೂ ನಾಗರಿಕರು ಸೇರಿ ನಡೆಸಿದ ಶೋಧ ವೇಳೆ ಆರೋಪಿಯನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕದ ಗದಗ ಹಳೆ ಹುಸೂರು ನಿವಾಸಿ ಹಾಲಪ್ಪ ಸುಬ್ಬಣ್ಣ ಇರಕ್ಕಾಲ್ (36) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತನನ್ನು ಮೇಲ್ಪರಂಬ ಠಾಣೆ ಇನ್ಸ್‌ಪೆಕ್ಟರ್ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಪೋಕ್ಸೋ ಪ್ರಕಾರ ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 8.30ರ ವೇಳೆ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಶಾಲೆಗೆ ತೆರಳಲೆಂದು ಬಸ್‌ಗಾಗಿ ಕಾದು ನಿಂತಿದ್ದ ಬಾಲಕಿ ಯನ್ನು ಆರೋಪಿ ಬಿಗಿದಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆಂದು ದೂರಲಾಗಿದೆ. ಈ ವೇಳೆ ಬಾಲಕಿ ಬೊಬ್ಬಿಡುತ್ತಾ ಅಲ್ಲಿಂದ ಓಡಿ ಪಾರಾಗಿ ಮನೆಗೆ ತೆರಳಿ ವಿಷಯ ತಿಳಿಸಿದ್ದಳು. ಬಳಿಕ ನಾಗರಿಕರ ಸಹಾಯ ದೊಂದಿಗೆ ನಡೆಸಿದ ಶೋಧ ವೇಳೆ ಹಾಲಪ್ಪನನ್ನು ಸೆರೆ ಹಿಡಿಯಲಾಗಿದೆ. ಆರೋಪಿ ಕೆಲಸ ಅರಸಿ ಈ ಭಾಗಕ್ಕೆ ತಲುಪಿದ್ದನೆಂದು ಪೊಲೀಸರು ತಿಳಿಸಿದ್ದಾರೆ.